

ಸಿದ್ದಾಪುರ: ಫೆಂಗಲ್ ಚಂಡಮಾರುತದ ಅಬ್ಬರಕ್ಕೆ ಸುರಿದ ಮಳೆಗೆ ತಾಲೂಕಿನಾದ್ಯಂತ ಕೃಷಿಕರ ಜೀವನಾಡಿ ಬೆಳೆಯಾಗಿರುವ ಭತ್ತ ಗದ್ದೆಯಲ್ಲಿಯೇ ಕೊಳೆಯುವಂತಾಗಿದೆ. ತಾಲೂಕಿನ ನೆಜ್ಜೂರು, ಮನಮನೆ, ಕವಂಚೂರು, ಅರೇಂದೂರು, ಹಲಗೇರಿ, ಕಾನಗೋಡ, ಶಿರಳಗಿ, ಬೇಡ್ಕಣಿ, ತ್ಯಾರ್ಸಿ, ಕಡಕೇರಿ, ಹಳಿಯಾಳ, ನಿಡಗೋಡ, ಕೋಲಸಿರ್ಸಿ ಸೇರಿದಂತೆ ಹಲವೆಡೆ ರೈತರು ಭತ್ತ ಕಟಾವು ಮಾಡಿದ್ದರು. ಆದರೆ, ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ಗದ್ದೆಗಳೆಲ್ಲ ಜಲಾವೃತಗೊಂಡು ಬೆಳೆ ಕೈಗೆ ಸಿಗದಂತಾಗಿದೆ.
ಮೊಳಕೆಯೊಡೆಯುತ್ತಿರುವ ಭತ್ತ: ಭತ್ತದ ಗದ್ದೆಯಲ್ಲಿ ನೀರು ನಿಂತಿರುವುದರಿಂದ ಭತ್ತ ಮೊಳಕೆ ಒಡೆಯುತ್ತಿದೆ. ಇನ್ನು ಭತ್ತದ ಹುಲ್ಲು ಕೊಳೆತು ಹಾನಿ ಆಗುತ್ತಿರುವುದರಿಂದ ಜಾನುವಾರುಗಳಿಗೆ ಮೇವೂ ಇಲ್ಲದಂತಾಗಿದೆ.
ಈಗಾಗಲೇ ತಾಲೂಕಿನಲ್ಲಿ ಶೇ.30ರಿಂದ 35ರಷ್ಟು ಭತ್ತದ ಬೆಳೆ ಕಟಾವು ಮಾಡಲಾಗಿದ್ದು, ಅದರಲ್ಲಿ ಶೇ.25ರಿಂದ 30 ರಷ್ಟು ಹಾನಿಯಾಗಿದೆ. ಇನ್ನು ಕೆಲವೆಡೆ ಮಳೆಯಿಂದಾಗಿ ಕಟಾವು ಮಾಡಬೇಕಾಗಿದ್ದ ಭತ್ತದ ಗದ್ದೆಗಳೆಲ್ಲ ನೆಲಕಚ್ಚಿದೆ.
ಈಗಾಗಲೇ ಮಳೆಯಿಂದಾಗಿ ಹಾನಿ ಉಂಟಾಗಿರುವ ಭತ್ತದ ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸರ್ಕಾರಕ್ಕೆ ಬೆಳೆಹಾನಿಯ ವರದಿ ಕಳುಹಿಸಲಾಗುವುದು
| ಪ್ರಶಾಂತ ಜಿ.ಎಸ್., ತಾಲೂಕು ಕೃಷಿ ಅಧಿಕಾರಿ, ಸಿದ್ದಾಪುರ