

ಕಂಪ್ಲಿ: ರೈತರ ಹಿತಾಸಕ್ತಿಗಾಗಿ ಪಟ್ಟಣದಲ್ಲಿ ತುರ್ತಾಗಿ ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ತಹಸೀಲ್ದಾರ್ ಎಸ್.ಶಿವರಾಜಗೆ ನಂ.3 ಸಣಾಪುರ ನೀರು ಬಳಕೆದಾರರ ಸಹಕಾರ ಸಂಘದಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ:ಜೋಳ, ಭತ್ತ ಖರೀದಿ ಕೇಂದ್ರ ಸ್ಥಾಪನೆ
ಸಂಘದ ಅಧ್ಯಕ್ಷ ಅಯ್ಯೋದಿ ವೆಂಕಟೇಶ ಮಾತನಾಡಿ, ಬೇಸಿಗೆ ಹಂಗಾಮಿನ ಭತ್ತದ ದರ ಕುಸಿದಿದೆ. ತುಂಗಭದ್ರಾ ನದಿ ಪಾತ್ರದಲ್ಲಿ ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೊಯ್ಲು ನಡೆದಿದ್ದು, ಸದ್ಯದ ದರಕ್ಕೆ ಮಾರಿದರೆ ರೈತರು ನಷ್ಟಕ್ಕೀಡಾಗುತ್ತಾರೆ. ಏ.10ರಿಂದ ಕಾಲುವೆಯಲ್ಲಿ ನೀರು ಸ್ಥಗಿತಗೊಂಡಿದ್ದು, ಸುಮಾರು 10ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಿಲ್ಲದೆ ಶೇ.30ರಿಂದ ಶೇ.40 ಭತ್ತದ ಇಳುವರಿ ಕುಸಿಯಲಿದೆ. ಆದ್ದರಿಂದ ಭತ್ತ ಖರೀದಿ ಕೇಂದ್ರ ಆರಂಭಿಸಿದರೆ ಮಾರುಕಟ್ಟೆಯಲ್ಲಿ ಭತ್ತ ದರ ಏರಿಕೆಯಾಗಿ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ನೀರು ಬಳಕೆದಾರರ ಸಂಘದ ಪದಾಧಿಕಾರಿಗಳಾದ ಅಲಬನೂರು ಬಸವರಾಜ, ಕೆ.ದೊಡ್ಡಬಸಪ್ಪ, ಸಿ.ಶರಣಗೌಡ, ಓಂಕಾರಗೌಡ, ಶರಣಪ್ಪ, ಎಚ್.ಡಿ.ದೊಡ್ಡಬಸಪ್ಪ, ಪ್ರಸಾದ್, ಅರುಣ್‌ಕುಮಾರ್, ಪಂಪಾಪತಿ ಇತರರಿದ್ದರು.