

ಮಂಡ್ಯ: ರಾಜ್ಯದ ಬಡಜನರಿಗೆ ವಿತರಿಸುವ ಅಕ್ಕಿಯನ್ನು ನೀಡದೆ ರಾಜಕೀಯ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ರಾಜ್ಯದ ಎಲ್ಲ ಸಂಸದರು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಬಿ. ಸೋಮಶೇಖರ್ ಒತ್ತಾಯಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ 10 ಕೆ.ಜಿ ಅಕ್ಕಿ ನೀಡುವುದಾಗಿ ಚುನಾವಣೆ ಪೂರ್ವದಲ್ಲಿ ೋಷಿಸಿತ್ತು. ಅದರಂತೆ ಇದೀಗ ಹೆಚ್ಚುವರಿ ಅಕ್ಕಿಗಾಗಿ ಕೇಂದ್ರ ಆಹಾರ ನಿಗಮಕ್ಕೆ ಪತ್ರ ಮುಖೇನ ಕೇಳಿಕೊಳ್ಳಲಾಗಿತ್ತು. ಪ್ರಾರಂಭದಲ್ಲಿ ಅಕ್ಕಿ ನೀಡುವುದಾಗಿ ಹೇಳಿದ ಅಲ್ಲಿನ ಅಧಿಕಾರಿಗಳು ನಂತರದ ದಿನಗಳಲ್ಲಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಕೊಡಲಾಗುವುದಿಲ್ಲವೆನ್ನುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅಕ್ಕಿ ವಿತರಿಸಿದರೆ ಕಾಂಗ್ರೆಸ್ ಸರ್ಕಾರಕ್ಕೆ ಜನಪ್ರಿಯತೆ ಬರುತ್ತದೆಂಬ ಕಾರಣಕ್ಕೆ ರಾಜಕೀಯ ಮಾಡಲಾಗಿತ್ತಿದೆ. ಅಕ್ಕಿಯನ್ನು ಕೇಂದ್ರ ಸರ್ಕಾರ ಉಚಿತವಾಗಿ ನೀಡಬೇಕಿಲ್ಲ. ಅದಕ್ಕೆ ತಗುಲುವ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತದೆ ಎಂದು ಹೇಳಿದರೂ ಅಕ್ಕಿ ಇಲ್ಲ ಎಂಬ ನಿರ್ಲಕ್ಷ್ಯ ಧೋರಣೆ ತಾಳಿದೆ. ಈಗಾಗಲೇ ನಮ್ಮ ಮುಖ್ಯಮಂತ್ರಿ, ಆಹಾರ ಸಚಿವರು ಬೇರೆ ರಾಜ್ಯಗಳಲ್ಲಿ ಅಕ್ಕಿ ಖರೀದಿಗೆ ಮುಂದಾಗಿದ್ದಾರೆ. ಅಂತೆಯೇ ರಾಜ್ಯದ ಬಡವರಿಗೆ ಉಚಿತವಾಗಿ 10 ಕೆ.ಜಿ ಅಕ್ಕಿಯನ್ನು ನೀಡುತ್ತೇವೆ ಎಂದು ತಿಳಿಸಿದರು.
5 ಕೆ.ಜಿ ಅಕ್ಕಿ ನೀಡಿ ಉಳಿದ 5 ಕೆ.ಜಿ ಅಕ್ಕಿಯ ಬದಲು ಹಣ ನೀಡುವಂತೆ ವಿರೋಧಿಗಳು ಹೇಳುತ್ತಿರುವುದು ಹಾಸ್ಯಾಸ್ಪದ. ಆಹಾರ ಭದ್ರತಾ ಕಾಯ್ದೆ ಪ್ರಕಾರ ಯಾರೂ ಹಸಿವಿನಿಂದ ನರಳಬಾರದು. 5 ಕೆ.ಜಿ ಅಕ್ಕಿ ಒಂದು ತಿಂಗಳಿಗೆ ಸಾಲುವುದಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಕಿಯನ್ನೇ ನೀಡಬೇಕು. ಅದರ ಬದಲು ಹಣ ನೀಡುವುದು ಸರಿಯಲ್ಲ. ಮಾರುಕಟ್ಟೆಯಲ್ಲಿ 34 ರೂಗಳಿಗೆ ಉತ್ತಮ ಗುಣಮಟ್ಟದ ಅಕ್ಕಿ ದೊರೆಯುವುದಿಲ್ಲ. 60 ರಿಂದ 170 ರೂ. ನೀಡಿ ಬಡವರು ಅಕ್ಕಿ ಕೊಳ್ಳಲಾಗದು. ಇದರಿಂದಾಗಿ ನಾವು ಬಡವರಿಗೆ ಅಕ್ಕಿಯನ್ನೇ ನೀಡಬೇಕಾಗಿದೆ ಎಂದು ವಿರೋಗಳಿಗೆ ತಿರುಗೇಟು ನೀಡಿದರು.
ಕಳೆದ 9 ವರ್ಷಗಳಿಂದ ಪಕ್ಷದ ವೇದಿಕೆಯಲ್ಲಿ ಬಿಜೆಪಿಯ ಕೋಮುವಾದ, ಜನವಿರೋಧಿ ನೀತಿಗಳನ್ನು ಖಂಡಿಸುತ್ತಲೇ ಬಂದಿದ್ದೇನೆ. ನಮ್ಮ ಮಾತಿಗೆ ಮನ್ನಣೆ ಸಿಗದಿದ್ದರಿಂದ ಬೇಸತ್ತು ಪಕ್ಷ ಬಿಡಬೇಕಾಯಿತು. ಪಠ್ಯಪುಸ್ತಕದಲ್ಲೂ ಧರ್ಮ ಮತ್ತು ಕೇಸರೀಕರಣ ಮಾಡಲು ಹೊರಟಿದ್ದರು. ಅದನ್ನು ಈಗಾಗಲೇ ನಮ್ಮ ಸರ್ಕಾರ ರದ್ದುಪಡಿಸಿ ಹೊಸ ಪಠ್ಯಪುಸ್ತಕ ವಿತರಣೆಗೆ ಕ್ರಮ ಕೈಗೊಂಡಿದೆ. ರೈತರಿಗೆ ಮಾರಕವಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಬಿಜೆಪಿ ಸರ್ಕಾರ ಕೈಗೊಂಡಿದ್ದ ಎಲ್ಲ ಜನವಿರೋಧಿ ಧೋರಣೆಗಳನ್ನು ವಾಪಸ್ ಪಡೆಯುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್, ಯುವ ಘಟಕ ಅಧ್ಯಕ್ಷ ವಿಜಯಕುಮಾರ್, ಒಬಿಸಿ ವಿಭಾಗದ ಅಧ್ಯಕ್ಷ ಕೃಷ್ಣ, ನಗರಸಭಾ ಸದಸ್ಯ ನಯೀಂ ಇದ್ದರು.