

ಆನೇಕಲ್: ಸರ್ಜಾಪುರದ ಖಾಸಗಿ ಗೋದಾಮಿನಲ್ಲಿ ಪಡಿತರ ಅಕ್ಕಿ ಸಂಗ್ರಹಿಸಿ ಅಕ್ರಮವಾಗಿ ತಮಿಳುನಾಡಿಗೆ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಅಕ್ರಮ ನಡೆದಿಲ್ಲ. ಇಲ್ಲಿನ ಪಡಿತರದಾರರಿಗೆ ನೀಡಲೆಂದೇ ಬಂದಿರುವ ಅಕ್ಕಿ ಇದಾಗಿದ್ದು, ದಾಸ್ತಾನು ಮಾಡಲು ಜಾಗವಿಲ್ಲದೆ ಖಾಸಗಿ ಗೋದಾಮಿನಲ್ಲಿ ಇಡಲಾಗಿದೆಯಷ್ಟೆ ಎಂದು ಆಹಾರ ಸಚಿವ ಗೋಪಾಲಯ್ಯ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ ಬೆನ್ನಲ್ಲೇ ಶನಿವಾರ ಬೆಂಗಳೂರು ಹೊರವಲಯದ ಸರ್ಜಾಪುರದ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಕಚೇರಿಗೆ ಹಾಗೂ ಗೋದಾಮುಗಳಿಗೆ ಸಚಿವರು ಮತ್ತು ಜಿಲ್ಲಾಧಿಕಾರಿಗಳ ತಂಡ ಭೇಟಿ ಪರಿಶೀಲಿಸಿತು.
ಬಳಿಕ ಮಾತನಾಡಿದ ಸಚಿವರು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಸರ್ಜಾಪುರ ಭಾಗದ ಜನರಿಗೆ ಮೂರು ತಿಂಗಳ ಪಡಿತರ ನೀಡುವ ಸಲುವಾಗಿ 16 ಸಾವಿರ ಕ್ವಿಂಟಾಲ್ ಅಕ್ಕಿ ಬಂದಿದೆ. ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಲ್ಲಿ ಅಷ್ಟು ಅಕ್ಕಿ ದಾಸ್ತಾನಿಗೆ ಜಾಗವಿಲ್ಲದ ಕಾರಣ ಖಾಸಗಿ ಗೋದಾಮಿನಲ್ಲಿ ಇಡಲಾಗಿದೆ. ನಮ್ಮ ಸರ್ಕಾರದಲ್ಲಿ ಪಡಿತರದಾರರಿಗೆ ನೀಡುವ ರೇಷನ್‌ನಲ್ಲಿ ಯಾವುದೇ ಅಕ್ರಮ ನಡೆಯಲು ಆಸ್ಪದ ನೀಡುವುದಿಲ್ಲ ಎಂದರು.
ತುರ್ತು ಪರಿಸ್ಥಿತಿಯಲ್ಲಿ ಪಡಿತರ ನೀಡುವಾಗ ತೂಕದಲ್ಲಿ ವಂಚನೆ ಹಾಗೂ ಹಣ ವಸೂಲಿ ಆರೋಪದಲ್ಲಿ 141 ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ. ಕೆಲ ಅಧಿಕಾರಿಗಳನ್ನೂ ಅಮಾನತು ಮಾಡಲಾಗಿದೆ. ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದರು.
ಹೊರವರ್ತುಲ ರಸ್ತೆ ಪ್ರಾಧಿಕಾರ ಅಧ್ಯಕ್ಷ ಸಿ.ಮುನಿರಾಜು ಮಾತನಾಡಿ, ರೇಷ್ಮೆ ಬೆಳೆಗಾರರ ಸಂಘ ಹಲವು ವರ್ಷದಿಂದ ಸರ್ಜಾಪುರ ಭಾಗದಲ್ಲಿ ಸಾಕಷ್ಟು ರೈತರಿಗೆ ನೆರವಾಗುತ್ತ ಬಂದಿದೆ. ಸರ್ಕಾರದಿಂದ 2 ತಿಂಗಳ ಅಕ್ಕಿ ಮುಂಗಡವಾಗಿ ಬಂದಿರುವ ಕಾರಣ ಗೋದಾಮಿನಲ್ಲಿ ಜಾಗವಿಲ್ಲದೆ ಮಂಜುನಾಥರೆಡ್ಡಿ ಎಂಬುವರ ಗೋದಾಮನ್ನು 2 ತಿಂಗಳ ಅವಧಿಗೆ ಬಾಡಿಗೆಗೆ ಪಡೆಯಲಾಗಿದೆ. ಈ ಬಗ್ಗೆ ಲಿಖಿತವಾಗಿ ಮಾಹಿತಿಯೂ ಇದೆ.
ಆದರೆ, ಕಾಂಗ್ರೆಸ್‌ನವರು ಇಂತಹ ಸಂದರ್ಭದಲ್ಲೂ ಸುಳ್ಳು ಆರೋಪ ಮಾಡುವ ಮೂಲಕ ರಾಜಕಾರಣ ಮಾಡುವುದು ಶೋಭೆಯಲ್ಲ ಎಂದು ಟೀಕಿಸಿದರು.
ಉಪ ವಿಭಾಗಾಧಿಕಾರಿ ಶಿವಣ್ಣ, ಆಹಾರ ಇಲಾಖೆ ಜಂಟಿ ನಿರ್ದೇಶಕಿ ಗಿರಿಜಾದೇವಿ, ಆನೇಕಲ್ ತಹಸೀಲ್ದಾರ್ ಮಹದೇವಯ್ಯ, ತಾಪಂ ಮಾಜಿ ಅಧ್ಯಕ್ಷ ವಿ. ಮುರಳಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೋಂಪುರ ಪುನೀತ್, ಆನೇಕಲ್ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಕೆ.ವಿ.ಶಿವಪ್ಪ, ಆನೇಕಲ್ ಮಂಡಲ ಅಧ್ಯಕ್ಷರಾದ ಎನ್.ಶಂಕರ್, ಜಯಪ್ರಕಾಶ್ ರೆಡ್ಡಿ, ಎಸ್.ಆರ್.ಟಿ. ಅಶೋಕ್, ಸರ್ಜಾಪುರ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಜುನಾಥ ರೆಡ್ಡಿ, ಬಿಜೆಪಿ ಮುಖಂಡರಾದ ಮಂಜುನಾಥರೆಡ್ಡಿ, ಟಿ.ವಿ.ಬಾಬು, ರೇಷ್ಮೆ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ರೆಡ್ಡಿ, ಶ್ರೀಧರ್ ಹಾಜರಿದ್ದರು.
ಅಕ್ಕಿ ದಾಸ್ತಾನು ವಿಚಾರದಲ್ಲಿ ಗೊಂದಲ ಇಲ್ಲ. ಯಾವ ಲೋಪವೂ ಆಗಿಲ್ಲ, ಎಲ್ಲವೂ ಸರಿಯಾಗಿದೆ. ಖಾಸಗಿ ಜಾಗದಲ್ಲಿ ದಾಸ್ತಾನು ಮಾಡಲು ಮೊದಲೇ ಪರವಾನಗಿ ಪಡೆದುಕೊಂಡಿದ್ದರು. ಶಿವಮೂರ್ತಿ, ಜಿಲ್ಲಾಧಿಕಾರಿ