ನಷ್ಟದಲ್ಲಿ ಭತ್ತ ಬೆಳೆಗಾರರು

10SPT1-
Published on

ಸೋಮವಾರಪೇಟೆ: ಭತ್ತದ ಕಣಜವೆಂದೇ ಪ್ರಖ್ಯಾತವಾಗಿದ್ದ ಸೋಮವಾರಪೇಟೆ ತಾಲೂಕಿನಲ್ಲಿ ಭತ್ತ ಬೆಳೆಗಾರರು ನಷ್ಟದ ಹಾದಿಯಲ್ಲಿದ್ದಾರೆ.


ಮುಂಗಾರು ವಿಳಂಬದಿಂದ ವಾಡಿಕೆ ಮಳೆ ಶೇ.50ರಷ್ಟು ಕಡಿಮೆಯಾದ ಹಿನ್ನೆಲೆಯಲ್ಲಿ ಭತ್ತ ಇಳುವರಿಯೂ ಶೇ.50ರಷ್ಟು ಕಡಿಮೆಯಾಗಿದೆ. ಗ್ರಾಮೀಣ ಭಾಗದಲ್ಲಿ ಮಳೆಯ ಕೊರತೆಯಿಂದ ಭತ್ತದ ಪೈರುಗಳ ಬೆಳವಣಿಗೆ ಕುಂಠಿತವಾಗಿ, ಭತ್ತ ಜೊಳ್ಳಾಗಿರುವುದನ್ನು ಕಂಡು ಕೃಷಿಕರು ಆತಂಕಗೊಂಡಿದ್ದಾರೆ.
ಜುಲೈ ತಿಂಗಳಿನಲ್ಲಿ ಒಂದು ವಾರ ಮಳೆ ಸುರಿದಿದ್ದನ್ನು ಹೊರತುಪಡಿಸಿದರೆ, ನಂತರ ಸರಿಯಾಗಿ ಮಳೆಯಾಗಲಿಲ್ಲ. ಕೊಳವೆ ಬಾವಿ, ಕೆರೆ, ಹೊಂಡಗಳ ನೀರನ್ನು ಉಪಯೋಗಿಸಿಕೊಂಡು ಬಹುತೇಕ ಕೃಷಿಕರು ಭತ್ತ ನಾಟಿ ಕಾರ್ಯ ಮುಗಿಸಿದ್ದರು. ನಂತರ ಮಳೆಯಿಲ್ಲದೆ ಭತ್ತದ ಕಡೆ ಆಸಕ್ತಿ ಕಳೆದುಕೊಂಡರು. ಬರದ ನಡುವೆಯೂ ಬೆಳೆದಿದ್ದ ಭತ್ತದ ಬೆಳೆ ಹೂ ಬಿಡುವ ಸಮಯ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಅಕಾಲಿಕ ಮಳೆ ಸುರಿದು ಬೆಳೆ ಹಾನಿಯಾಯಿತು. ಒಟ್ಟಾರೆ ಪ್ರಸಕ್ತ ವರ್ಷ ಭತ್ತ ಬೆಳೆಗಾರರಿಗೆ ಕರಾಳವಾಗಿದೆ. ಸಿಕ್ಕಷ್ಟು ಫಸಲು ಸಿಗಲಿ ಎಂದು ಭತ್ತ ಕೊಯ್ಲು ಪ್ರಾರಂಭಿಸಿದ್ದಾರೆ.


ಕಾಡುಪ್ರಾಣಿಗಳ ಹಾವಳಿ: ಕೂತಿ, ಯಡದಂಟೆ, ಹರಪಳ್ಳಿ, ಸಿಂಗನಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳು ಭತ್ತದ ಗದ್ದೆಗೆ ನುಗ್ಗಿ ಹಾನಿ ಮಾಡಿವೆ. ಯಡವಾರೆ, ಸಜ್ಜಳ್ಳಿ, ಐಗೂರು, ಸಂಪಿಗೆಕೊಲ್ಲಿ ಗ್ರಾಮಗಳಲ್ಲಿ ಕಾಡಾನೆಗಳು ಮತ್ತು ಕಾಡುದನಗಳು ಭತ್ತದ ಗದ್ದೆಗೆ ನುಗ್ಗಿ ತಿಂದು, ತುಳಿದು ಹಾನಿಪಡಿಸಿವೆ.


ಸೂಕ್ತ ಪರಿಹಾರವಿಲ್ಲ: ಫಸಲು ಹಾನಿ ಸಂಭವಿಸಿದರೂ ಸರ್ಕಾರದಿಂದ ಸೂಕ್ತ ಪರಿಹಾರ ಸಿಗುವುದಿಲ್ಲ. ಫಸಲು ಹಾನಿಯ ಬಗ್ಗೆ ಕೃಷಿ ಇಲಾಖೆ ಸಮೀಕ್ಷೆ ಮಾಡುತ್ತಿಲ್ಲ. ಗದ್ದೆಯಲ್ಲಿ ಫಸಲು ಹಾನಿಯ ಅಂದಾಜು ಸಿಗುವುದಿಲ್ಲ. ಭತ್ತ ಕೊಯ್ಲು ಮಾಡಿ, ಸಂಗ್ರಹ ಮಾಡುವ ಸಂದರ್ಭ ಕೃಷಿಕನಿಗೆ ಮಾತ್ರ ಫಸಲು ಹಾನಿ ಬಗ್ಗೆ ತಿಳಿಯುತ್ತದೆ. ನಷ್ಟವನ್ನು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮನವರಿಗೆ ಮಾಡಿಕೊಡಲು ಸಾಧ್ಯವಿಲ್ಲ. ಕಂಪ್ಯೂಟರ್ ಮಾಹಿತಿ ತೆಗೆದುಕೊಳ್ಳುವುದಿಲ್ಲ ಎಂದು ಸಿಬ್ಬಂದಿ ನೆಪ ಹೇಳುತ್ತಾರೆ ಎಂಬುದು ಯಡೂರು ಗ್ರಾಮದ ರೈತ ಎ.ಆರ್.ಕುಶಾಲಪ್ಪ ಅವರ ನೋವಿನ ನುಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net