

ಶನಿವಾರಸಂತೆ: ಭತ್ತ ಬೆಳೆಯಿಂದ ಲಾಭ ಗಳಿಸಲು ಸಾಧ್ಯವಾಗದ ಕಾರಣ ಅಡಕೆ ಮತ್ತು ಕಾಫಿ, ಜೋಳ, ಶುಂಠಿ, ಬಾಳೆ ಬೆಳೆಯಲು ಬಹಳಷ್ಟು ರೈತರು ಮುಂದಾಗಿದ್ದಾರೆ.
ನಿಡ್ತ ಗ್ರಾಮ ಪಂಚಾಯಿತಿಗೆ ಸೇರಿದ ಹಿತ್ತಲಕೇರಿ ಗ್ರಾಮದಲ್ಲಿ ರೈತಾಪಿ ವರ್ಗದವರೇ ಹೆಚ್ಚಿದ್ದಾರೆ. ಭತ್ತ ಹಾಗೂ ಹಸಿರು ಮೆಣಸಿನಕಾಯಿ, ಕಾಫಿ, ಅಡಕೆ, ಬಾಳೆ, ಜೋಳ ಬೆಳೆದು ಜೀವನ ನಡೆಸುತ್ತಿದ್ದಾರೆ. ಹಲವು ವರ್ಷಗಳಿಂದ ಗದ್ದೆಗಳಲ್ಲಿ ಭತ್ತ ಬೆಳೆಯುತ್ತಿದ್ದ ರೈತ ಕಾರ್ಮಿಕರ ಕೊರತೆ, ದುಬಾರಿ ಕೂಲಿಯಿಂದ ಭತ್ತ ಬೆಳೆಯಲು ಮನಸ್ಸು ಮಾಡುತ್ತಿಲ್ಲ ಎಂದು ವಿಜಯವಾಣಿ ನಡೆಸಿದ ಸಂವಾದದಲ್ಲಿ ರೈತರು ಅಳಲು ತೋಡಿಕೊಂಡಿದ್ದಾರೆ.
ಭತ್ತಕ್ಕೆ ಬೆಂಬಲ ಬೆಲೆ ದೊರೆಯದಿರುವುದು, ಲಾಭಕ್ಕಿಂತ ಖರ್ಚು ಹೆಚ್ಚು ಮುಂತಾದ ಸಮಸ್ಯೆಯಿಂದ ಬೇಸತ್ತು ತೋಟಗಾರಿಕಾ ಬೆಳೆ, ಅಡಕೆ ಮತ್ತು ಕಾಫಿ ಬೆಳೆಗೆ ಅನಿವಾರ್ಯವಾಗಿ ರೈತ ಬದಲಾಗಿದ್ದಾನೆ. ಜತೆಗೆ ಜೋಳ ಬೆಳೆಯಲು ಮುಂದಾಗಿದ್ದಾರೆ. ಕಳೆದ 6, 7 ವರ್ಷಗಳಿಂದ ಹಿತ್ತಲಕೇರಿ ವ್ಯಾಪ್ತಿಯಲ್ಲಿ ಬಹಳಷ್ಟು ರೈತರು ಗದ್ದೆಗಳಲ್ಲಿ ಮನೆಗಾಗುವಷ್ಟು ಮಾತ್ರ ಭತ್ತ ಬೆಳೆಯುತ್ತಿದ್ದಾರೆ. ಇದರಿಂದ ಶೇ.35ರಷ್ಟು ಭತ್ತ ಬೆಳೆಯುತ್ತಿದ್ದ ಗದ್ದೆಗಳಲ್ಲಿ ಈಗ ಅಡಕೆ, ಕಾಫಿ, ಬಾಳೆ ಬೆಳೆ ಬಂದಿದೆ ಎಂದು ರೈತರು ಹೇಳಿಕೊಂಡರು.
ಅಧಿಕ ಸಂಖ್ಯೆಯ ರೈತರು ಭತ್ತ ಬೆಳೆಯುತ್ತಿದ್ದ ಗದ್ದೆಗಳಲ್ಲಿ ಅಡಕೆ ಬೆಳೆಯುತ್ತಿದ್ದಾರೆ. ಇದು ದೀರ್ಘಾವಧಿ ಬೆಳೆಯಾದರೂ ಭತ್ತ ಬೆಳೆಯಲು ಸಮಸ್ಯೆಗಳೇ ಹೆಚ್ಚಾಗಿದೆ. ಸಾವಯವ ಕೃಷಿಯಲ್ಲಿ ಆದಾಯ ಕಡಿಮೆ ಇದೆ. ರಾಸಾಯನಿಕ ಗೊಬ್ಬರ ಸೇರಿದಂತೆ ಕೀಟನಾಶಕಗಳ ಬಳಕೆ ಅನಿವಾರ್ಯವಾಗಿದೆ. ಇದಕ್ಕೆ ದುಬಾರಿ ಬೆಲೆಯನ್ನೂ ತೆರಬೇಕಾಗಿದೆ. ಹಾಗಾಗಿ ಗೊಬ್ಬರಗಳ ಮೇಲಿನ ಬೆಲೆ ಕಡಿಮೆ ಮಾಡಬೇಕಿದೆ ಎಂದು ಸಂವಾದದಲ್ಲಿ ಪಾಲ್ಗೊಂಡಿದ್ದ ಮಂಜುನಾಥ್ ಅಭಿಪ್ರಾಯಪಟ್ಟರು.
ಬೆಂಬಲ ಬೆಲೆ ಇದ್ದರೂ ರೈತರಿಗೆ ಸಿಗುವುದಿಲ.್ಲ ಮಧ್ಯವರ್ತಿಗಳಿಗೆ ಮಾತ್ರ ಸಿಗುತ್ತಿದೆ. ಮೊದಲು ಈ ಹಾವಳಿ ತಪ್ಪಿಸಬೇಕು. ನಮ್ಮ ಬೆಳೆಗೆ ಸ್ಥಳೀಯವಾಗಿ ಮಾರುಕಟ್ಟೆ ಒದಗಿಸಬೇಕು. ಇದರಿಂದ ನೀವು ನೇರವಾಗಿ ಬೆಳೆದ ಬೆಳೆಗಳನ್ನು ಮಾರಾಟ ಮಾಡಬಹುದು ಎಂದು ಸತೀಶ್ ಸಲಹೆ ನೀಡಿದರು.
ಹಲವು ವರ್ಷಗಳಿಂದ ಗದ್ದೆಯಲ್ಲಿ ನಾವು ಭತ್ತ ಬೆಳೆಯುತ್ತಿದ್ದೆವು. ಆದರೆ, ಭತ್ತ ಬೆಳೆಯಲು ಕಾರ್ಮಿಕರ ಕೊರತೆ, ಸರಿಯಾದ ಬೆಲೆ ಸಿಗದಿರುವುದು, ಲಾಭಕಿಂತ ಖರ್ಚು ಹೆಚ್ಚು ಈ ಸಮಸ್ಯೆಗಳಿಂದ ಭತ್ತ ಬೆಳೆಯುತ್ತಿಲ್ಲ. ಈಗ ಗದ್ದೆಯಲ್ಲಿ ಅಡಕೆ ಬೆಳೆಯುತ್ತಿದ್ದೇವೆ. 5-6 ವರ್ಷದ ಬಳಿಕ ಅಡಕೆ ಫಸಲು ನೀಡುತ್ತದೆ. ಇದರಿಂದ ಭವಿಷ್ಯದಲ್ಲಿ ಅಡಕೆ ಬೆಳೆಯಿಂದ ಲಾಭ ಜಾಸ್ತಿಯಾಗಿದೆ. ಜತೆಗೆ ಹಸಿಮೆಣಸಿನಕಾಯಿ ಬೆಳೆಯುತ್ತಿದ್ದೇವೆ, ಇದರಿಂದ ಆದಾಯ ಹೆಚ್ಚು ಪಡೆಯುತಿದ್ದೇನೆ.
ಮಂಜುನಾಥ್ ರೈತ, ಹಿತ್ತಲಕೇರಿ
ಭತ್ತಕ್ಕೆ ಬೆಂಬಲ ಬೆಲೆ ಇದೆ ಎನ್ನುತ್ತಾರೆ. ಆದರೆ ಅದು ನಮ್ಮಂತಹ ಸಣ್ಣ ರೈತರಿಗೆ ಸಿಗುವುದಿಲ್ಲ, ಮಧ್ಯವರ್ತಿಗಳಿಗೆ ಸಿಗುತ್ತದೆ. ಕಳೆದ ವರ್ಷ ಭತ್ತಕ್ಕೆ ಉತ್ತಮ ಬೆಲೆ ಸಿಕ್ಕಿತ್ತು. ಬೆಲೆಗೆ ತಕ್ಕ ಖರ್ಚು ಸಹ ಇದೆ, ಉತ್ತಮ ಬೆಲೆ ಸಿಕ್ಕರೆ ನಮಗೆ ಬೇರೆ ಉದ್ಯೋಗ ಬೇಡ. ಕೃಷಿಯಿಂದ ಉತ್ತಮ ಆದಾಯ ಪಡೆಯ ಬಹುದು.
ಧರ್ಮಪ್ಪ ರೈತ, ಹಿತ್ತಲಕೇರಿ
ನಮ್ಮ ಹಿತ್ತಲಕೇರಿ ಗ್ರಾಮದಲ್ಲಿ ಭತ್ತ ಬೆಳೆಯುವ 150 ರಿಂದ 200 ಎಕರೆಗಿಂತ ಹೆಚ್ಚು ಗದ್ದೆಯಿದೆ. ಅದರಲ್ಲಿ ಹೆಚ್ಚಿನ ಪ್ರದೇಶದ ಗದ್ದೆಯಲ್ಲಿ ಅಡಕೆ, ಬಾಳೆ, ಕಾಫಿ ಇನ್ನಿತರ ಬೆಳೆಗಳನ್ನು ಬೆಳೆಯುತಿದ್ದಾರೆ. ಭತ್ತ ಊಟಕ್ಕಾಗುವಷ್ಟು ಮಾತ್ರ ಬೆಳೆಯುತ್ತಿದ್ದಾರೆ. ಭತ್ತ ಬೆಳೆ ಬೆಳೆಯಲು ಇತ್ತೀಚೆಗೆ ಖರ್ಚು ಹೆಚ್ಚು, ಆದಾಯಕ್ಕಿಂತ ನಷ್ಟ ಹೆಚ್ಚು, ಭತ್ತಕ್ಕೆ ನಿಗದಿತ ಬೆಲೆ ನಿಗದಿಪಡಿಸಿ ಅದು ಸರಿಯಾದ ಸಮಯಕ್ಕೆ ರೈತರಿಗೆ ತಲುಪುವ ವ್ಯವಸ್ಥೆ ಮಾಡಬೇಕು.
ಸತೀಶ್, ಯುವ ರೈತ ಹಿತ್ತಲಕೇರಿ
ಈ ಹಿಂದೆ ಆರು ತಿಂಗಳ ಭತ್ತದ ತಳಿಯನ್ನು ನಾವು ಬೆಳೆಯುತ್ತಿದ್ದೇವೆ. ಆದರೆ, ಇತ್ತೀಚೆಗೆ ಮೂರು ತಿಂಗಳ ಭತ್ತದ ತಳಿಗಳು ಬಂದಿದೆ. ಇದು ಬೇಗ ಬೆಳೆ ಕೈ ಸೇರುತ್ತೆ. ಆದರೆ, ಇದು ರುಚಿ ಇಲ್ಲ, ಹೆಚ್ಚು ಸಮಯ ಶೇಖರಿಸಲು ಸಾಧ್ಯವಾಗುತ್ತಿಲ್ಲ. ನಮಗೆ ಹಳೆಯ ಭತ್ತದ ತಳಿಗಳೆ ಸಿಕ್ಕರೆ ಒಳ್ಳೆಯದು. ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು.
ಪುನೀತ್ ರೈತ, ತಾಳರು
ಭತ್ತ ಬೆಳೆಯಲು ಹಿಂದೆ ಎತ್ತುಗಳಿಂದ ಉಳುಮೆ ಮಾಡಿಸಿ ಬೆಳೆಯುತ್ತಿದ್ದೆವು. ಆದರೆ ಯಂತ್ರಗಳು ಬಂದಿದ್ದು ಇದು ಸಹ ದುಬಾರಿ ಬಾಡಿಗೆ ನೀಡಬೇಕಾಗಿದೆ. ಇದರಿಂದ ಭತ್ತ ಬೆಳೆಯುವ ರೈತರಿಗೆ ಆದಾಯ ಕಿಂತ ಖರ್ಚು ಹೆಚ್ಚು, ಇದರಿಂದ ಗದ್ದೆಯಲ್ಲಿ ಹಸಿರು ಮೆಣಸು, ಅಡಕೆ, ಕಾಫಿ, ಜೋಳ, ಶುಂಠಿ, ಬಾಳೆ ಮುಂತಾದ ಬೆಳೆ ಬೆಳೆಯುತಿದ್ದಾರೆ.
ಚಿಂತಾಮಣಿ, ರೈತ ಮಹಿಳೆ, ಹಿತ್ತಲಕೇರಿ
ಕೃಷಿಯನ್ನೇ ನಂಬಿರುವ ನಮಗೆ ಸರಿಯಾಗಿ ಬಿತ್ತನೆ ಬೀಜ ಸಿಗುತ್ತಿಲ್ಲ. ಸಾವಯವ ಮಾದರಿಯಲ್ಲಿ ಯಾವುದೇ ಬೆಳೆ ಬೆಳೆದರು ಹೆಚ್ಚು ಲಾಭ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ರಾಸಾಯನಿಕ ಗೊಬ್ಬರ, ಕೀಟನಾಶಕ ಸಿಂಪಡಣೆ ಮಾಡಲೇಬೇಕಿದೆ. ವಾತಾವರಣ ಏರಿಳಿತದಿಂದ ನಿರೀಕ್ಷಿತ ಆದಾಯ ಪಡೆಯಲು ಸಾಧ್ಯವಾಗುತ್ತಿಲ್ಲ.
ಭರತ್, ಯುವ ರೈತ, ಹುಲುಸೆ
ಈ ಹಿಂದೆ ಗದ್ದೆಯಲ್ಲಿ ಹೆಚ್ಚು ಆದಾಯ ಬರುತ್ತಿತ್ತು. ಇತ್ತೀಚೆಗೆ ಗದ್ದೆ ಕೆಲಸಕ್ಕೆ ಕಾರ್ಮಿಕರ ಕೊರತೆ ಇದೆ. ಗದ್ದೆ ಕೆಲಸಕ್ಕೆ ಹೆಚ್ಚು ವೇತನ ನೀಡಬೇಕು. ಭತ್ತದ ಹುಲ್ಲಿನಿಂದ ಆದಾಯ ಬರುತ್ತಿತ್ತು. ಆದರೆ ಯಂತ್ರಗಳ ಮೂಲಕ ಭತ್ತದ ಬೆಳೆ ಕಟಾವು ಮಾಡುವುದರಿಂದ ಹುಲ್ಲು ಗದ್ದೆಯಲ್ಲೇ ಪುಡಿಯಾಗುತ್ತದೆ.
ಚಂದ್ರ ಶೇಖರ್, ರೈತ, ಗಣಗೂರು
ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಬೆಲೆ ಸಿಗದೆ ಸಂಕಷ್ಟ ಎದುರಾಗಿದೆ. ಸ್ಥಳೀಯ ಮಟ್ಟದಲ್ಲಿ ರೈತರು ಬೆಳೆದಿರುವ ಬೆಳೆಗಳಿಗೆ ಮಾರುಕಟ್ಟೆ ಒದಗಿಸಬೇಕು. ರೈತರಿಗೆ ಅದರಲ್ಲೂ ಯುವ ರೈತರನ್ನು ಪ್ರೋತ್ಸಾಹ ನೀಡಬೇಕು. ಇದರಿಂದ ಯಾವುದೇ ಹೊಲ ಗದ್ದೆಗಳು ಖಾಲಿ ಇರುವುದಿಲ್ಲ. ಇತ್ತೀಚೆಗೆ ಯುವಕರು ಹೊಲ-ಗದ್ದೆಗಳಿದ್ದರೂ ನಗರ ಪ್ರದೇಶಗಳಲ್ಲಿ ಕೆಲಸಕ್ಕೆ ತೆರಳುತ್ತಾರೆ. ಯುವ ರೈತರಿಗೆ ಪ್ರೋತ್ಸಾಹ ನೀಡಿದರೆ ಯಾರು ಸಹ ಪಟ್ಟಣಕ್ಕೆ ತೆರಳುವುದಿಲ್ಲ.
ಮೋಹನ್, ರೈತ, ಬೀಳಹ