ಅತಿಕ್ರಮಣ ಜಮೀನಿನಲ್ಲಿದ್ದ ಭತ್ತದ ಬೆಳೆ ನಾಶ

21 ylp 07 (forest)
Published on

ಯಲ್ಲಾಪುರ: ತಾಲೂಕಿನ ಉಚಗೇರಿಯ ರಾಜೀವಾಡದಲ್ಲಿ ಸೈನಿಕನ ಕುಟುಂಬದ ಜಿಪಿಎಸ್ ಆಗಿರುವ ಅತಿಕ್ರಮಣ ಜಮೀನಿನಲ್ಲಿದ್ದ ಭತ್ತದ ಬೆಳೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ನಾಶ ಮಾಡಿದ್ದಾರೆ.

ಈ ಕುರಿತು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೀರು ಸಕ್ಕು ತೋರವತ್ ಅವರು ಬೆಂಗಳೂರಿನ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರಿದ್ದಾರೆ.

ನಮ್ಮ ತಂದೆ ಸಕ್ಕು ಬಾಬು ತೋರವತ್ ಅವರ ಅಧಿಕೃತವಾಗಿ ಜಿಪಿಎಸ್ ಆಗಿರುವ ಜಮೀನಿನಲ್ಲಿ ಅಣ್ಣ ಹಾಗೂ ತಮ್ಮಂದಿರು ಚಿಪಗೇರಿ ಅರಣ್ಯ ಸ.ನಂ 2 ರಲ್ಲಿ 2 ಎಕರೆ ಕ್ಷೇತ್ರ ಅತಿಕ್ರಮಣ ಮಾಡಿ ಸಾಗುವಳಿ ಮಾಡುತ್ತಿದ್ದಾರೆ. ಈ ಕುರಿತು ಅಧಿಕೃತವಾಗಿ 2014 ರಲ್ಲಿ ಜಿಪಿಎಸ್ ಆಗಿದೆ. ಕಳೆದ ಜೂನ್ ತಿಂಗಳಲ್ಲಿ ರಜೆಗೆಂದು ಊರಿಗೆ ಬಂದಾಗ ಅಣ್ಣ ತಮ್ಮಂದಿರೊಂದಿಗೆ ಭತ್ತದ ನಾಟಿ ಮಾಡಲು ಭೂಮಿ ಹದಗೊಳಿಸಿ, ಬೀಜ ಬಿತ್ತಿ, ರಕ್ಷಣೆಗೆ ಬೇಲಿ ಮಾಡಿ ಕರ್ತವ್ಯಕ್ಕೆ ಮರಳಿದ್ದೇನೆ ಎಂದರು.

ಯಾವುದೇ ಸೂಚನೆ, ನೋಟಿಸ್ ನೀಡದೇ ಚಿಪಗೇರಿ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ಗದ್ದೆಯ ಬೇಲಿ ಖುಲ್ಲಾಪಡಿಸಿದ್ದಾರೆ. ನಾಟಿ ಮಾಡಿದ ಭತ್ತದ ಸಸಿಗಳನ್ನು ಕಿತ್ತು, ಸಮೀಪದಲ್ಲಿದ್ದ ಅಡಕೆ ಸಸಿಗಳನ್ನೂ ಕಡಿದು, ಆ ಜಾಗದಲ್ಲಿ ಅರಣ್ಯ ಸಸಿಗಳನ್ನು ನೆಟ್ಟಿದ್ದಾರೆ. ಗದ್ದೆ ಸಮೀಪದಲ್ಲಿದ್ದ ಮನೆಯನ್ನು ಕೆಡವಿದ್ದಾರೆ. ಬೇಲಿಯ ತಂತಿ, ಕಂಬ ಹಾಗೂ ಮನೆಯ ಹೆಂಚುಗಳನ್ನೂ ತೆಗೆದುಕೊಂಡು ಹೋಗಿದ್ದಾರೆ.

ಅರಣ್ಯ ಅಧಿಕಾರಿಗಳ ಕಾನೂನು ಬಾಹಿರ ಕೃತ್ಯದಿಂದಾಗಿ ಮನಸ್ಸಿಗೆ ತೀರಾ ಆಘಾತವಾಗಿದೆ. ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ಮಾನಸಿಕವಾಗಿ ಅಡ್ಡಿಯಾಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ನಮಗೆ ಆದ ನಷ್ಟ ಭರಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net