ಭತ್ತ ಸಸಿಗೆ ಕೊಳವೆ ಹುಳ ಕಾಟ

bhatta
bhatta
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ ಕರಾವಳಿಯಲ್ಲಿ ವರ್ಷದಿಂದ ವರ್ಷಕ್ಕೆ ಹವಾಮಾನ ವೈಪರೀತ್ಯ, ಕಾರ್ಮಿಕರ ಸಮಸ್ಯೆ, ಸೂಕ್ತ ಬೆಂಬಲವಿಲ್ಲದೆ ಭತ್ತ ಕೃಷಿ ಹಿನ್ನಡೆಯಾಗುತ್ತಿದೆ. ಈ ನಡುವೆ ಭತ್ತ ಕೃಷಿಗೆ ಕೀಟಗಳ ಕಾಟದಿಂದಾಗಿ ರೈತರು ಕಂಗಾಲಾಗಿದ್ದಾರೆ. ಭತ್ತದ ಗದ್ದೆಗಳಲ್ಲಿ ಎಲೆ ಸುರಳಿ ಹುಳುಗಳ ಕಾಟ ಹೆಚ್ಚಿದ್ದು, ಇಳುವರಿ ಕುಂಠಿತವಾಗವ ಭೀತಿ ಎದುರಾಗಿದೆ. ತಡವಾಗಿ ಭತ್ತ ನಾಟಿ ಮಾಡುವುದು, ಪ್ರಾರಂಭಿಕ ಮಳೆಯ ವೈಪರೀತ್ಯ, ಅವೈಜ್ಞಾನಿಕ-ಅಕಾಲಿಕ ಹತೋಟಿ ಕ್ರಮಗಳು ಕೀಟ ಬಾಧೆ ಹೆಚ್ಚಾಗುತ್ತಿರುವುದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು. ತಡವಾಗಿ ನಾಟಿ ಮಾಡಿದ ಕುಂದಾಪುರ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಈ ಹುಳಗಳು ಕಾಣಿಸಿಕೊಂಡಿದ್ದು, ಭತ್ತದ ಸಸಿಗಳು ಅಲ್ಲೇ ಕಮರುತ್ತಿವೆ. ಬಾಧೆಯ ಲಕ್ಷಣಗಳು: ಎಲೆ ಸುರುಳಿ ಮರಿ ಹುಳ ಭತ್ತ ಎಲೆ ಮಡಚಿ, ಸುರುಳಿ ಸುತ್ತಿ ಒಳಗಡೆಯಿಂದ ಎಲೆಯನ್ನು ತಿನ್ನುತ್ತಾ ಬರುತ್ತದೆ. ಕೊಳವೆ ಮರಿ ಹುಳಗಳು ಎಲೆಯ ತುದಿ ಕತ್ತರಿಸಿ ಕೊಳವೆ ನಿರ್ಮಿಸಿಕೊಂಡು ಭತ್ತದ ಎಲೆಗೆಳಿಗೆ ಅಂಟಿಕೊಂಡಿರುತ್ತವೆ. ಕೊಳವೆ ಸಮೇತ ಗದ್ದೆಯಲ್ಲಿರುವ ನೀರಿನ ಮೇಲೆ ತೇಲುತ್ತಲೇ ಮರಿ ಹುಳುಗಳು ಇನ್ನೊಂದು ಕಡೆ ಚಲಿಸುತ್ತವೆ. ಭತ್ತ ನಾಟಿ ಮಾಡಿದ 15 ದಿನಗಳ ನಂತರ ಈ ಹುಳಗಳ ಬಾಧೆ ಪ್ರಾರಂಭವಾಗಿ ಭತ್ತದ ಸಸಿ ಕವಲು ಒಡೆಯುವಾಗ ಹುಳುಗಳ ಕಾಟ ಹೆಚ್ಚಾಗಿರುತ್ತದೆ. ನಂತರ ತೆನೆಯೊಡೆಯುವ ಸಮಯದಲ್ಲಿ ಕ್ರಮೇಣ ಕಡಿಮೆಯಾಗುತ್ತದೆ. ಈ ಹುಳಗಳನ್ನು ವೈಜ್ಞಾನಿಕವಾಗಿ ನಿಯಂತ್ರಣ ಮಾಡದಿದ್ದರೆ ಭತ್ತದ ಬೆಳೆಯನ್ನೇ ಸಂಪೂರ್ಣ ನಾಶ ಮಾಡುತ್ತವೆ. ಮೂರು ವರ್ಷಗಳಿಂದ ಭತ್ತದ ಎಲೆ ಸುರುಳಿ ಕೀಟ, ಕೊಳವೆ ಹುಳದ ಕಾಟ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಮರಿ ಹುಳಗಳು ತಿಳಿಹಸಿರು ಬಣ್ಣ ಹೊಂದಿದ್ದು, ಭತ್ತದ ಎಲೆಗಳನ್ನು ಸಂಪೂರ್ಣ ತಿನ್ನುತ್ತವೆ. ಕೃಷಿಕರು ಸಮೀಪದ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ ವೈಜ್ಞಾನಿಕ ಮಾದರಿಯಲ್ಲಿ ಕೀಟನಾಶಕ ಸಿಂಪಡಿಸಿದಲ್ಲಿ ಕೀಟಬಾಧೆಯನ್ನು ಹತೋಟಿಗೆ ತಂದು ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ.

ಸಮಗ್ರ ಹತೋಟಿ ಕ್ರಮಗಳು

ಭತ್ತದ ಸಸಿಗಳನ್ನು ಬೇಗ ನಾಟಿ ಮಾಡಿದರೆ ಈ ಹುಳಗಳ ಹಾವಳಿ ಕಡಿಮೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು. ಸುತ್ತಮುತ್ತಲಿರುವ ರೈತರು ಒಂದೇ ಸಮಯದಲ್ಲಿ ನಾಟಿ ಮಾಡಿದರೂ ಹುಳಗಳ ಬಾಧೆ ಕಡಿಮೆ ಇರುತ್ತದೆ. ಗದ್ದೆಯ ಬದುಗಳ ಮೇಲಿರುವ ಕಳೆ ನಿಯಂತ್ರಣ ಮಾಡಬೇಕು. ಶಿಫಾರಸ್ಸು ಮಾಡಿದ ರಾಸಾಯನಿಕ ಕೀಟನಾಶಕಗಳನ್ನು ಭತ್ತದ ಬೆಳೆ ಮೇಲೆ 15 ದಿನಗಳ ಅಂತರದಲ್ಲಿ ಸಿಂಪಡಣೆ ಮಾಡಿದಾಗ ಹುಳಗಳನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು ಎಂದು ಬ್ರಹ್ಮಾವರ ಕೃಷಿ ಕೇಂದ್ರ, ವಲಯ ಸಂಶೋಧನಾ ಕೇಂದ್ರ ವಿಜ್ಞಾನಿಗಳಾದ ಡಾ.ಬಿ.ಧನಂಜಯ, ಡಾ.ರೇವಣ್ಣ ರೇವಣ್ಣವರ, ಡಾ.ಶಂಕರ ಎಂ. ಮಾಹಿತಿ ನೀಡಿದ್ದಾರೆ.

ತಡವಾಗಿ ಭತ್ತ ನಾಟಿ ಮಾಡುವುದು ಈ ಕೀಟ ಬಾಧೆ ಹೆಚ್ಚಾಗುತ್ತಿರುವುದಕ್ಕೆ ಮುಖ್ಯ ಕಾರಣ. ಬೇಗ ನಾಟಿ ಮಾಡಿದರೆ ಹುಳಗಳ ಹಾವಳಿ ಕಡಿಮೆ ಇರುತ್ತದೆ. ರೈತರು ಒಂದೇ ಸಮಯದಲ್ಲಿ ನಾಟಿ ಮಾಡಿದರೆ ಈ ಹುಳಗಳ ಬಾಧೆ ಕಡಿಮೆ ಇರುತ್ತದೆ. ಡಾ.ಧನಂಜಯ ಕೃಷಿ ವಿಜ್ಞಾನಿ, ಬ್ರಹ್ಮಾವರ ಕೃಷಿ ಕೇಂದ್ರ ಮತ್ತು ವಲಯ ಸಂಶೋಧನಾ ಕೇಂದ್ರ ಅವಿಭಜಿತ ಕುಂದಾಪುರ ತಾಲೂಕಿನ ಹಲವು ಕಡೆಗಳಲ್ಲಿ ಭತ್ತ ಕೃಷಿಗೆ ಎಲೆ ಸುರುಳಿ, ಕೊಳವೆ ಹುಳ ಕಾಟ ಕಾಣಿಸಿಕೊಂಡಿದೆ. ತಡವಾಗಿ ನಾಟಿ ಮಾಡಿದ ಕಡೆಗಳಲ್ಲಿ ಇದು ಕಾಣಿಸಿಕೊಂಡಿದ್ದು, ಭತ್ತದ ಸಸಿಗಳು ನಾಶವಾಗುತ್ತಿವೆ. ಇದರ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ವಿಜಯ ಪೂಜಾರಿ ಪ್ರಗತಿಪರ ಕೃಷಿಕ ಗಂಗೊಳ್ಳಿ https://www.vijayavani.net/the-role-of-mothers-is-essential-in-student-life https://www.vijayavani.net/kundapra-language-is-prevalent-all-over-the-world

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net