Web Exclusive | ‘ರೈಸ್​ಬಾತ್’ ಎಂದರೆ ಈ ಗ್ರಾಮಗಳ ಜನರಿಗೆ ಭಯಂಕರ ಭಯ..!

web exclusive
Published on

| ಕಿರಣ್ ಮಾದರಹಳ್ಳಿ ಚಾಮರಾಜನಗರ

ಆಹಾರ ಪ್ರಿಯರು ಇಷ್ಟ ಪಡುವ ‘ರೈಸ್​ಬಾತ್’ ಎಂದರೆ ಈ ಗ್ರಾಮಗಳ ಜನರಿಗೆ ಭಯಂಕರ ಭಯ. ಇವರ ಮನೆಗಳಲ್ಲಿ ಬಾತ್ ಮಾಡಲ್ಲ, ಹೋಟೆಲ್​ಗಳಿಗೆ ಹೋದರೂ ಬಾತ್ ತಿನ್ನಲ್ಲ. ಏಕೆಂದರೆ ರೈಸ್​ಬಾತ್ ಇವರ ಬದುಕನ್ನೇ ಬರ್ಬಾದ್ ಮಾಡಿ, ಸದಾ ಬೆಚ್ಚಿ ಬೀಳುವಂತೆ ಮಾಡಿದೆ!

ಇದು ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ 22 ತಿಂಗಳ ಹಿಂದೆ (2018, ಡಿ.14) ಪ್ರಸಾದ ರೂಪದಲ್ಲಿ ವಿಷ ಮಿಶ್ರಣಗೊಂಡಿದ್ದ ರೈಸ್​ಬಾತ್ ತಿಂದು ಮೃತ್ಯುವಿನೊಂದಿಗೆ ಹೋರಾಡಿ ಬದುಕುಳಿದ ಬಿದರಹಳ್ಳಿ, ಮಾರ್ಟಳ್ಳಿ, ಸುಳವಾಡಿ, ದೊರೆಸ್ವಾಮಿ ಮೇಡು, ವಡ್ಡರದೊಡ್ಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಅಸ್ವಸ್ಥರ ಅಸಲಿ ಕಥೆ. ವಿಷ ಪ್ರಸಾದ ಪ್ರಕರಣದಲ್ಲಿ 17 ಜನ ಮೃತಪಟ್ಟಿದ್ದರು. ಇವರ ಸಾವಿಗೆ ಕಾರಣವಾದ ರೈಸ್​ಬಾತನ್ನು ಮೃತರ ಮನೆಯವರು ವಿರೋಧಿಸುತ್ತಾರೆ. ಅಸ್ವಸ್ಥಗೊಂಡಿದ್ದ 125ಕ್ಕೂ ಹೆಚ್ಚು ಜನರು ರೈಸ್​ಬಾತ್ ತಿನ್ನುವುದಿರಲಿ, ಅದನ್ನು ನೋಡಿದರೆ ಸಾಕು ಸುಸ್ತು ಹೊಡೆಯುತ್ತಾರೆ.

‘ಅನ್ನ ನೋಡಿದರೆ ವಾಕರಿಕೆ ಬಂದಂತೆ ಎನಿಸುತ್ತದೆ. ಊಟದ ಪರಿಮಳ ಬಾಯಲ್ಲಿ ನೀರೂರಿಸುವ ಬದಲು ತಲೆ ಸುತ್ತು ಬರಿಸುತ್ತದೆ. ರಾಗಿ ಮುದ್ದೆ, ಗಂಜಿ ಕುಡಿದು ನಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ. ವೈದ್ಯರ ಬಳಿ ನಮ್ಮ ಸಮಸ್ಯೆ ಹೇಳಿಕೊಂಡರೆ, ವಿಷ ಪ್ರಸಾದದ ಗುಂಗಿನಿಂದ ಹೊರಬನ್ನಿ ಎನ್ನುತ್ತಾರೆ’ ಎಂದು ಬಿದರಹಳ್ಳಿ ನಿವಾಸಿ ಸರೋಜ ಅಳಲು ತೋಡಿಕೊಳ್ಳುತ್ತಾರೆ.

ಮಗಳಿಗೆ ಗಂಡು ಸಿಕ್ತಿಲ್ಲ!

ಬಿದರಹಳ್ಳಿ ಗ್ರಾಮದ ಮಹಿಳೆಯೊಬ್ಬರ ಮರು ವಿವಾಹಕ್ಕೂ ‘ವಿಷ ಪ್ರಸಾದ ರೈಸ್​ಬಾತ್’ ಅಡ್ಡಿಯಾಗಿದೆ. ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಅಸ್ವಸ್ಥಗೊಂಡಿದ್ದ ಬಿದರಹಳ್ಳಿಯ ಸೌಂದರ್ಯಗೆ(27) ರೈಸ್​ಬಾತ್ ಪ್ರಸಾದ ಸೇವನೆಯೇ ಕಂಕಣ ಭಾಗ್ಯ ಕೂಡಿಬಾರದಂತೆ ಮಾಡಿದೆ. ಇವರು ಮುರುಗೇಶ್ ಎಂಬುವರನ್ನು ವಿವಾಹವಾಗಿದ್ದರು. 6 ತಿಂಗಳ ಗರ್ಭಿಣಿಯಾಗಿದ್ದ ವೇಳೆ ವಿಷ ಪ್ರಸಾದ ಸೇವಿಸಿ ಅಸ್ವಸ್ಥಗೊಂಡು ಗರ್ಭಪಾತವಾಯಿತು. ಕೆಲವು ದಿನಗಳ ಬಳಿಕ ಪತಿ ಮುರುಗೇಶ್ ಕೂಡ ಅನಾರೋಗ್ಯದಿಂದ ನಿಧನರಾದರು. ವಿಷ ಪ್ರಸಾದ ಸೇವನೆಯಿಂದ ಆಗಾಗ್ಗೆ ಅಸ್ವಸ್ಥಗೊಳ್ಳುವ ಸೌಂದರ್ಯ ಅವರನ್ನು ಮರು ವಿವಾಹವಾಗಲು ಯಾರೂ ಒಪ್ಪುತ್ತಿಲ್ಲ. ಮಗಳು ಸೌಂದರ್ಯಳ ಜೀವನ ಹಾಳಾಗಿ ಹೋಯಿತು. ಇದನ್ನು ಸರಿಪಡಿಸುವುದು ಹೇಗೆ? ಎಂದು ತಾಯಿ ಸಿದ್ದಮ್ಮ ಚಿಂತೆಗೀಡಾಗಿದ್ದಾರೆ.

ಮಂಜೂರಾಗದ ಜಮೀನು

2018ರ ಡಿ.14ರಂದು ದೇವಸ್ಥಾನದಲ್ಲಿ ಪ್ರಸಾದ ಸಿದ್ಧಪಡಿಸಿದ್ದ ಅಡುಗೆ ತಯಾರಕ ಪುಟ್ಟಸ್ವಾಮಿ ಈ ವೃತ್ತಿಯನ್ನೇ ಬಿಟ್ಟು ಬಿಟ್ಟಿದ್ದಾರೆ. ವಿಷ ಪ್ರಸಾದ ಸೇವಿಸಿ ಮೃತಪಟ್ಟ ಅವರ 13 ವರ್ಷದ ಮಗಳ ನೆನಪಿನಲ್ಲಿ ಜೀವನ ನಡೆಸುತ್ತಿದ್ದಾರೆ. ವಿಷ ಪ್ರಸಾದ ಸೇವಿಸಿದ ಪರಿಣಾಮ ಒಂದು ಕಣ್ಣು ಕಳೆದುಕೊಂಡಿರುವ ಬಿದರಹಳ್ಳಿ ಗ್ರಾಮದ ನರಸಿಂಹ ಅವರು ದೈಹಿಕ ಬಲಹೀನತೆಯಿಂದ ಬಳಲುತ್ತಿದ್ದಾರೆ. ಅಸ್ವಸ್ಥರಿಗೆ ನಿಶ್ಯಕ್ತಿ, ತಲೆನೋವು, ಹೊಟ್ಟೆ ನೋವು ಬಾಧಿಸುತ್ತಿದೆ. ವಿಷ ಪ್ರಸಾದ ಸೇವಿಸಿ ಮೃತಪಟ್ಟವರ ಕುಟುಂಬಕ್ಕೆ ಮತ್ತು ಅಸ್ವಸ್ಥರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಲಕ್ಷಾಂತರ ರೂ. ಪರಿಹಾರ ನೀಡಲಾಗಿದೆ. ಸರ್ಕಾರದ ವಿವಿಧ ಯೋಜನೆಗಳಡಿ ಕೆಲ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ. ಆದರೆ ಭರವಸೆ ನೀಡಿದಂತೆ ಜಮೀನು ಮಂಜೂರು ಮಾಡಿಲ್ಲ.

‘ಅಂಬಿಕಾ ಬಾತ್’ ಜನಪ್ರಿಯ!

ಸುಳವಾಡಿ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಹೋಟೆಲ್​ಗಳಲ್ಲಿ ರೈಸ್​ಬಾತ್​ಗೆ ವಿಷ ಪ್ರಸಾದ ಪ್ರಕರಣದ ಆರೋಪಿ ಅಂಬಿಕಾ ಹೆಸರಿಡುವ ಮೂಲಕ ‘ಅಂಬಿಕಾ ರೈಸ್​ಬಾತ್’ ಎಂದು ಕೆಲವರು ಲೇವಡಿ ಮಾಡುತ್ತಾರೆ. ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದ ಆಡಳಿತ ಮಂಡಳಿ ಹಣಕಾಸು ವಿಚಾರದಲ್ಲಿ ನಡೆಸಿದ ಎರಡು ಗುಂಪುಗಳ ಒಳಬೇಗುದಿಗೆ 2018ರ ಡಿ.14ರಂದು ದೇಗುಲದ ರಾಜಗೋಪುರ ಶಂಕುಸ್ಥಾಪನೆ ಪೂಜಾ ಕಾರ್ಯದಲ್ಲಿ ತಯಾರಿಸಿದ್ದ ಪ್ರಸಾದ ರೈಸ್​ಬಾತ್​ಗೆ ವಿಷ ಬೆರೆಸಲಾಗಿತ್ತು. ಈ ಪ್ರಕರಣದ ಆರೋಪಿಗಳಾದ ಸಾಲೂರು ಮಠದ ಕಿರಿಯ ಸ್ವಾಮೀಜಿಯಾಗಿದ್ದ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ, ದೊಡ್ಡತಮ್ಮಡಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೆಲವು ತಿಂಗಳ ಹಿಂದೆ ಇಮ್ಮಡಿ ಮಹದೇವಸ್ವಾಮಿ ಕೋರಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.

ಭರದ ಸಿದ್ಧತೆ

ವಿಷ ಪ್ರಸಾದ ಪ್ರಕರಣದಿಂದ ಬಾಗಿಲು ಮುಚ್ಚಿದ್ದ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದ ಬಾಗಿಲು ತೆರೆಯುವ ಹಿನ್ನೆಲೆಯಲ್ಲಿ ಅ.21ರಿಂದ 24ರವರೆಗೆ ಪೂಜಾ ಕಾರ್ಯಗಳನ್ನು ನಡೆಸಲು ಸಿದ್ಧತೆ ನಡೆದಿದೆ. ಅ.24ರ ಮಧ್ಯಾಹ್ನ 12.30ಕ್ಕೆ ಭಕ್ತರಿಗೆ ಮಾರಮ್ಮನ ದರ್ಶನ ದೊರೆಯಲಿದೆ.

ಕುಸುಬಲಕ್ಕಿ ಅನ್ನ ಈಗೀಗ ಒಗ್ಗುತ್ತಿದೆ. ಅದು ಕೂಡ ಹೆಚ್ಚಾದರೆ ಜೀರ್ಣಗೊಳ್ಳದೆ ವಾಂತಿ ಬಂದಂತಾಗುತ್ತದೆ. ತೇಗು ಬರದೆ ಪರದಾಡಬೇಕು. ಆಗ ಕೈ ಕಾಲುಗಳು ನಡುಗುತ್ತವೆ. ನಮ್ಮ ಅನಾರೋಗ್ಯ ಸಮಸ್ಯೆ ಕೇಳುವವರಿಲ್ಲ.|ಮಾರಕ್ಕ, ಬಿದರಹಳ್ಳಿ, ಹನೂರು.

ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸುಳವಾಡಿ ಸಮೀಪದ ಬಿದರಹಳ್ಳಿ ಗ್ರಾಮದ ಅಸ್ವಸ್ಥ ಮಹಿಳೆಯರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net