ತಾಳಮದ್ದಲೆಗಿದೆ ದೃಶ್ಯ ಕಟ್ಟುವ ಸಾಮರ್ಥ್ಯ

Rhythm has the ability to create a scene.
ಸಿದ್ದಾಪುರ ತಾಲೂಕಿನ ಕೋಡ್ಸರ-ಮುಠ್ಠಳ್ಳಿಯಲ್ಲಿ ಆಯೋಜಿಸಿದ್ದ ಸರಣಿ ತಾಳಮದ್ದಳೆ ಕಾರ್ಯಕ್ರಮದ ಸಮಾರೋಪ ಸಮಾರಂಭಲ್ಲಿ ದಿವಾಕರ ಹೆಗಡೆ ಕೆರೆಹೊಂಡ ಮಾತನಾಡಿದರು. ಸೀತಾರಾಮ ಹೆಗಡೆ ಹೊಂಡಗಾಸಿ, ಪಿ.ವಿ. ಹೆಗಡೆ ಹೊಸಗದ್ದೆ ಉಪಸ್ಥಿತರಿದ್ದರು.
Published on

ಸಿದ್ದಾಪುರ: ಪುರಾಣ, ಭಾಗವತ ಇತ್ಯಾದಿಗಳ ಕಥೆಗಳು ಎಲ್ಲರಿಗೂ ತಿಳಿದಿರುತ್ತದೆ. ಕೇವಲ ಕಥೆ ಹೇಳುವಂತಾಗದೇ ಅದನ್ನು ನಾಟಕೀಯವಾಗಿ ಕಟ್ಟಿಕೊಡುವ ಸಾಮರ್ಥ್ಯ ಇರುವುದು ತಾಳಮದ್ದಳೆ ಕಲಾ ಪ್ರಾಕಾರಕ್ಕೆ ಮಾತ್ರ ಎಂದು ದಿವಾಕರ ಹೆಗಡೆ ಕೆರೆಹೊಂಡ ಹೇಳಿದರು.

ತಾಲೂಕಿನ ಕೋಡ್ಸರ-ಮುಠ್ಠಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಾ ಭಾಸ್ಕರ ಇಟಗಿ ಅವರು ಆಯೋಜಿಸಿದ್ದ ಸರಣಿ ತಾಳಮದ್ದಳೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ವೇಷಭೂಷಣ, ಕುಣಿತ ಅಭಿನಯಗಳಿಲ್ಲದೇ ಕೇವಲ ಮಾತುಗಾರಿಕೆಯ ಮೂಲಕವಾಗಿ ಆಯ್ದುಕೊಂಡ ಕಥಾಭಾಗದ ಪ್ರಸ್ತುತಿ ಇಲ್ಲಿ ನಡೆಯುತ್ತದೆ. ಕೇವಲ ಸಿದ್ಧ ಪಠ್ಯದ ಮಾತುಗಾರಿಕೆ ಅಲ್ಲ. ಒಂದೇ ಕಥೆಯು ಕಲಾವಿದರ ಸೃಜನಶೀಲತೆಯಿಂದ ಪ್ರತಿದಿನವೂ ವಿಭಿನ್ನವಾಗಿಯೇ ಚಿತ್ರಿತವಾಗುತ್ತದೆ. ಸೃಜನಶೀಲತೆಯಿಂದ ಒಳಗೊಂಡ ಮಾತುಕತೆ ಮಾತ್ರ ನಾಟಕವನ್ನು ಕಟ್ಟಿಕೊಡಬಲ್ಲದು. ಕಲಾವಿದ ಎಷ್ಟು ಸಂಭಾಷಣಾ ಚತುರ ಹಾಗೂ ಸೃಜನಶೀಲನಾಗಿರುತ್ತಾನೋ ತಾಳಮದ್ದಳೆ ಅಷ್ಟು ಉತ್ತಮವಾಗಿ ಸಾಗುತ್ತದೆ ಎಂದರು.

ಊರಿನ ಹಿರಿಯರಾದ ಸೀತಾರಾಮ ಹೆಗಡೆ ಹೊಂಡಗಾಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಪಿ.ವಿ. ಹೆಗಡೆ ಹೊಸಗದ್ದೆ ಮಾತನಾಡಿದರು. ರವಿ ಹೆಗಡೆ ನೇರ್ಲಮನೆ ಉಪಸ್ಥಿತರಿದ್ದರು. ನಂತರ ಶ್ರೀ ಸಿದ್ಧಿವಿನಾಯಕ ರೈತ ಯುವಕ ಸಂಘ ಕೋಡ್ಸರ-ಮುಠ್ಠಳ್ಳಿ ಇವರ ಆಶ್ರಯದಲ್ಲಿ ಹೊಸ್ತೋಟ ಮಂಜುನಾಥ ಭಾಗವತ ವಿರಚಿತ ಶ್ರೀ ರಾಮ ನಿರ್ಯಾಣ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸೃಜನ್ ಗಣೇಶ ಹೆಗಡೆ ಮಧುರ ಹಾಗೂ ಭಾವಪೂರ್ಣವಾಗಿ ಹಾಡಿದರು. ಮದ್ದಳೆಯಲ್ಲಿ ಮಂಜುನಾಥ ಗುಡ್ಡೇದಿಂಬ ಚಂಡೆಯಲ್ಲಿ ರಘುಪತಿ ಹೆಗಡೆ ಹೂಡೇಹದ್ದ ಸಹಕರಿಸಿದರು.

ಮುಮ್ಮೇಳದಲ್ಲಿ ರಾಧಾಕೃಷ್ಣ ಕಲ್ಚಾರ್ ವಿಟ್ಲ(ಶ್ರೀರಾಮ), ದಿವಾಕರ ಹೆಗಡೆ ಕೆರೆಹೊಂಡ(ಲಕ್ಷ್ಮಣ), ಸರ್ಪಂಗಳ ಈಶ್ವರ ಭಟ್(ದೂರ್ವಾಸ) ಹಾಗೂ ವಿಷ್ಣು ಶರ್ಮ ವಾಟೇಪದ್ಪು(ಕಾಲಪುರುಷ) ಪಾತ್ರ ನಿರ್ವಹಿಸಿ ಮೆಚ್ಚುಗೆಗಳಿಸಿದರು.

ರಾಮಕೃಷ್ಣ ಹೆಗಡೆ ಬಕ್ಕೇಮನೆ ಸ್ವಾಗತಿಸಿ ಪರಿಚಯಿಸಿದರು. ವಿನಾಯಕ ಹೆಗಡೆ ಕವಲಕೊಪ್ಪ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net