

ಬಂಗಾರಪೇಟೆ : ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಲು ಪ್ರತಿಭಾ ಪುರಸ್ಕಾರ ಸಹಕಾರಿಯಾಗಿದ್ದು, ಇದರಿಂದ ಮತ್ತಷ್ಟು ಮಕ್ಕಳು ಪ್ರೇರೇಪಿತರಾಗಿ ಅವರೂ ಸಾಧನೆ ಮಾಡಿ ಪುರಸ್ಕಾರಕ್ಕೆ ಭಾಜನರಾಗುತ್ತಾರೆ. ಈ ಮೂಲಕ ನವ ಸಮಾಜ ನಿಮಾರ್ಣದ ಶಿಲ್ಪಿಗಳಾಗಿ ಹೊರಹೊಮ್ಮುತ್ತಾರೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಎಸ್.ಎನ್. ಸಿಟಿಯಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘ, ಸರ್ಕಾರಿ ಮಹಿಳಾ ನೌಕರರ ಸಂಘ ಹಾಗೂ ಕಾಂಗ್ರೆಸ್ ಮುಖಂಡರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2ನೇ ವರ್ಷದ ಸವೋರ್ದಯ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಅಧಿಕಾರ ಸಿಕ್ಕಾಗ ಸಮಾಜದ ಬಡ ಮಕ್ಕಳನ್ನು ಹಾಗೂ ಪ್ರತಿಭಾವಂತರನ್ನು ಶೈಕ್ಷಣಿಕವಾಗಿ ಸಬಲರಾಗಿ ಮಾಡಿ, ಅವರು ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕುವಂತೆ ಮಾಡುವುದೇ ನಮ್ಮ ಗುರಿ. ಈ ವರ್ಷ ಸಾವಿರ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡಲಾಗಿದೆ. ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ, ಸರ್ಕಾರಿ ಶಾಲೆ ಮಕ್ಕಳಲ್ಲದೇ ಖಾಸಗಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನೂ ಗುರುತಿಸಿ ಪುರಸ್ಕರಿಸಲಾಗುತ್ತಿದೆ ಎಂದರು.