

ಕಲಘಟಗಿ: ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಅರ್ಥಪೂರ್ಣ ಕಾರ್ಯವನ್ನು ಮಕ್ಕಳ ಸಾಹಿತ್ಯ ಪರಿಷತ್ ಮಾಡುತ್ತಿರುವುದು ಶ್ಲಾಘನೀಯ ಎಂದು ರಂಗಭೂಮಿ ಕಲಾವಿದ ಎಚ್.ಎನ್. ಸುಣಗದ ಹೇಳಿದರು.
ತಾಲೂಕಿನ ಮುಕ್ಕಲ ಗ್ರಾಮದ ಡಾ.ಬಿ ಆರ್. ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಶೈಕ್ಷಣಿಕ ಹಂತದಲ್ಲಿ ಉತ್ತಮ ಸಾಧನೆ ಮಾಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಬೇಕು ಎಂದರು.
ಮಕ್ಕಳ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಎಸ್.ಎಂ. ಒಡೆಯರ್ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡದೇ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.
ರಾಜ್ಯ ಯುವ ಪ್ರಶಸ್ತಿ ವಿಜೇತ ಪ್ರಭುಲಿಂಗ ರಂಗಾಪುರ ಮಾತನಾಡಿದರು. ಕನ್ನಡ ಭಾಷಾ ವಿಷಯದಲ್ಲಿ ಪ್ರತಿಶತ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಆರ್.ಎಚ್. ಕುಂದರಗಿ, ಪ್ರಕಾಶ ಕುಂಬಾರ, ಪದ್ಮಾಕ್ಷಿ ಒಡೆಯರ್, ಮಂಜುನಾಥ ಜಾಯನಗೌಡ್ರ, ಹುಲೆಪ್ಪ ಗ್ಯಾನಪ್ಪನವರ, ಶಿವು ವಾಲಿಕಾರ, ವಕೀಲ ರಮೇಶ ಸೊಲ್ಲಾರಗೊಪ್ಪ, ಸಾತಪ್ಪ ಕುಂಕೂರ, ಪ್ರೌಢ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.