ಉತ್ತಮರನ್ನು ಪುರಸ್ಕರಿಸಿ

5blrp9
ಬೇಲೂರಿನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕ ಪಾಲಾಕ್ಷ ಅವರನ್ನು ಸನ್ಮಾನಿಸಲಾಯಿತು. ಹೆಬ್ಬಾಳು ಹಾಲಪ್ಪ, ಶಿವಮರಿಯಪ್ಪ, ತೀರ್ಥಕುಮಾರಿ ಇತರರು ಇದ್ದರು. 
Published on

ಬೇಲೂರು: ಪ್ರಸ್ತುತ ದಿನಗಳಲ್ಲಿ ಮಕ್ಕಳ ಹಾಗೂ ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಶಿಕ್ಷಕರಿಗೆ ಪ್ರಶಸ್ತಿ-ಪುರಸ್ಕಾರಗಳು ದೂರವಾಗುತ್ತಿವೆ ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಹೇಳಿದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ಪಟ್ಟಣದ ಬಿಆರ್‌ಸಿ ಕೇಂದ್ರದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕ ಪಾಲಾಕ್ಷ ಅವರನ್ನು ಸನ್ಮಾನಿಸಿ ಮಾತನಾಡಿ, ಪ್ರಶಸ್ತಿಗಳನ್ನು ನೀಡುವಲ್ಲೂ ಜಾತಿ, ಧರ್ಮ ಮತ್ತು ರಾಜಕೀಯದ ಲಾಬಿ ನಡೆಯುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.

ತಾಲೂಕಿನಲ್ಲಿ ಎಲೆಮರೆ ಕಾಯಿಯಂತೆ ಸಾಕಷ್ಟು ಶಿಕ್ಷಕರು ದುಡಿಯುತ್ತಿದ್ದಾರೆ. ಇಂತಹ ಶಿಕ್ಷಕರನ್ನು ಗುರುತಿಸುವ ಕೆಲಸ ತಾಲೂಕು ಆಡಳಿತ ಮಾಡಬೇಕು. ಆದರೆ ಜಾತಿ, ಧರ್ಮದ ಜತೆಗೆ ರಾಜಕೀಯ ಲೆಕ್ಕಚಾರದಿಂದ ಇತ್ತೀಚೆಗೆ ಪ್ರಶಸ್ತಿಗೆ ಆಯ್ಕೆ ಮಾಡುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಶರಣ ಸಾಹಿತ್ಯ ಪರಿಷತ್ ಈ ಅಪವಾದ ಹೊರತುಪಡಿಸಿ 39 ವಷರ್ ವಿದ್ಯಾರ್ಥಿಗಳ ಕಲಿಕೆಗೆ ಜೀವನ ಮೀಸಲಿಟ್ಟ ಶಿಕ್ಷಕ ಕರಿಕಟ್ಟೆಹಳ್ಳಿ ಪಾಲಾಕ್ಷ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಮುಂದಿನ ದಿನದಲ್ಲಿ ಇನ್ನು ಹೆಚ್ಚಿನ ಸೇವಾ ಚಟುವಟಿಕೆಗಳನ್ನು ಮಾಡಲು ಪರಿಷತ್ ಬದ್ಧವಾಗಿದೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ ಮಾತನಾಡಿ, ಪ್ರಾಥಮಿಕ ಶಿಕ್ಷಣ ಪ್ರತಿಯೊಬ್ಬರ ಬದುಕಿನಲ್ಲಿ ಪ್ರಾಮುಖ್ಯತೆ ನೀಡುತ್ತದೆ. ಅಂದು ಕಲಿತ ಶಿಕ್ಷಣ, ಕ್ರೀಡೆ ಜತೆಗೆ ಸಂಸ್ಕಾರ ಎಲ್ಲರ ಬದುಕಿಗೆ ಪೂರಕವಾಗುತ್ತದೆ. ಇಂಜಿನಿಯರ್, ವೈದ್ಯ, ರಾಜಕಾರಣಿಗಳು, ಮಠಾಧೀಶರು ಸೇರಿದಂತೆ ದೊಡ್ಡ ಹುದ್ದೆಗಳಿಂತ ಶಿಕ್ಷಕ ವೃತ್ತಿ ಪವಿತ್ರವಾದದ್ದು. ಗುರು-ಶಿಷ್ಯರ ಸಂಬಂಧ ಸಮಾಜಕ್ಕೆ ಪೂರಕವಾಗಬೇಕಿದೆ.

ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಪಾಲಾಕ್ಷ, ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ತೀರ್ಥಕುಮಾರಿ, ಶರಣ ಸಾಹಿತ್ಯ ಪರಿಷತ್ ತಾಲೂಕು ಉಪಾಧ್ಯಕ್ಷೆ ಗೀತಾ, ಪ್ರಧಾನ ಕಾರ್ಯದರ್ಶಿ ರಾಜಕುಮಾರ್, ಖಜಾಂಚಿ ಧನಂಜಯ್, ಯುವ ಅಧ್ಯಕ್ಷ ಆರ್.ಎಸ್.ಮಹೇಶ್, ಇಸಿಒ ಶಿವಪ್ಪ, ನಿರ್ದೇಶಕರಾದ ಗೌರ, ರುದ್ರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net