

ಮುಳಗುಂದ: ರಿವಾರ್ಡ್ ಯೋಜನೆಯಡಿ ನಿರ್ಮಿಸಲಾದ ಬದು, ಕೃಷಿ ಹೊಂಡ ಇತರ ಮಣ್ಣು ಚಟುವಟಿಕೆಯನ್ನು ರೈತರು ಜತನದಿಂದ ಕಾಪಾಡಿಕೊಳ್ಳಬೇಕು. ಇದರಿಂದ ಜಲಾನಯನದ ಅಭಿವೃದ್ಧಿ ಸಾಧ್ಯ ಎಂದು ವಿಶ್ವ ಬ್ಯಾಂಕ್ ತಾಂತ್ರಿಕ ಮಿಷನ್ ತಂಡದ ಕಾರ್ಯ ನಿರ್ವಹಣಾಧಿಕಾರಿ ಮೂರ್ತಿ ಜಿವ್ಹಾಳ ಹೇಳಿದರು.
ಇಲ್ಲಿನ ಗವಿಮಠದಲ್ಲಿ ಕೃಷಿ ಇಲಾಖೆ ಗದಗ, ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆ, ವಿಶ್ವಬ್ಯಾಂಕ್ ತಾಂತ್ರಿಕ ಮಿಷನ್ ತಂಡದಿಂದ ಮುಳಗುಂದ ಜಲಾನಯನ ವಲಯದ ರೈತರು ಹಾಗೂ ಸ್ವ ಸಹಾಯ ಸಂಘದ ಮಹಿಳಾ ಸದಸ್ಯರ ಜತೆಗೆ ಬುಧವಾರ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಿವಾರ್ಡ್ ಯೋಜನೆಯು ಸಂಪೂರ್ಣ ವೈಜ್ಞಾನಿಕ ರೀತಿಯಲ್ಲಿ ಜಲಾನಯನ ಉಪಚಾರ ಕ್ರಮವಾಗಿದೆ. ಇದರ ಸಂಪೂರ್ಣ ಉಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು.
ಡಾ. ರತ್ನಾಕರ, ಕುಲರಂಜನ್, ಡಾ. ರಾಜೇಂದ್ರ ಹೆಗಡೆ, ಗೀತಾ ಹಳ್ಳಿ, ಗದಗ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಉಪ ನಿರ್ದೇಶಕಿ ಸ್ಫೂರ್ತಿ ಜಿ.ಎಸ್, ಸಹಾಯಕ ನಿರ್ದೇಶಕ ಮಲ್ಲಯ್ಯ ಕೊರವನವರ, ಸಹಾಯಕ ಅಧಿಕಾರಿ ಎಪ್.ಸಿ. ಗುರಿಕಾರ, ಶಿವಯ್ಯ ಮನಗೇನಮಠ, ಡಿ.ಜಿ. ಯಳವತ್ತಿ ಇತರರು ಇದ್ದರು.