ಮೊಸರು ಗಡಿಗೆ ಒಡೆದ ಗಾರ್ಡನ್ ಬಾಯ್ಸಗೆ ಬಹುಮಾನ

h25-Mosur Gadige 2
Published on

ಹುಬ್ಬಳ್ಳಿ: ಕೆಳಗೆ ಜಡಿಮಣ್ಣಿನ ಕೆಸರು, ಬ್ಯಾರಲ್ ತುಂಬಿಟ್ಟಿದ್ದ ನೀರು ಎರಚುವುದು, ಚೀರಾಟ-ಕೂಗಾಟದ ಮಧ್ಯೆ ಗುಂಪಿನಮೇಲೊಂದಿರುವ ಗುಂಪು ಹತ್ತಿ ವ್ಯಕ್ತಿಯೊಬ್ಬ ಮೇಲಿದ್ದ ಮೊಸರು ಗಡಿಗೆ ಒಡೆಯುವುದು….
ಇಲ್ಲಿಯ ಅಕ್ಷಯ ಪಾರ್ಕ್ ಸಂತೆ ಮೈದಾನದಲ್ಲಿ ಸೋಮವಾರ ಗಾರ್ಡನ್ ಬಾಯ್ಸ ತಂಡ 20 ಅಡಿ ಎತ್ತರದಲ್ಲಿದ್ದ ಮೊಸರು ಗಡಿಗೆ ಒಡೆದು 25 ಸಾವಿರ ರೂ. ನಗದು ಬಹುಮಾನ ಮುಡಿಗೇರಿಸಿಕೊಂಡಿತು.
ಗಡಿಗೆ ಒಡೆಯುವುದು ಅಷ್ಟೊಂದು ಸರಳವಲ್ಲ. ಕೊಟ್ಟ ಸಮಯ, ದಿಟ್ಟ ಹೆಜ್ಜೆ ಇಟ್ಟು ಗುಂಪಿನ ಮೇಲೊಂದು ಗುಂಪು ಕೊನೆಗೆ ಏರಿದ ವ್ಯಕ್ತಿ ಗಡಿಗೆ ಒಡೆಯುವುದು ಅಷ್ಟು ಸುಲಭವಲ್ಲ. ಆದರೆ, ಕೊಟ್ಟ ಸಮಯದಲ್ಲಿಯೇ ಎರಡು-ಮೂರು ಬಾರಿ ಪ್ರಯತ್ನಿಸಿ ವಿಫಲವಾಗಿದ್ದ ಗಾರ್ಡನ್ ಬಾಯ್ಸ ತಂಡ, ಆನಂದನಗರ ಬಾಯ್ಸ ತಂಡ ಗೆಲ್ಲದಂತೆ ನೋಡಿಕೊಂಡಿತು. ಇನ್ನೇನು ಇವರೇ ಗಡಿಗೆ ಒಡೆದು ಗೆದ್ದು ಬಿಟ್ಟರು ಎಂದು ಕೇಕೆ ಹಾಕಿ ಕುಪ್ಪಳಿಸುತ್ತಿದ್ದವರು, ಆಗಾಗ ಪೇಚು ಮೋರೆ ಹಾಕುವಂತೆ, ಲಚಗುಟ್ಟುವಂತೆ ಈ ತಂಡಗಳು ಮಾಡಿಬಿಟ್ಟಿದ್ದವು.
ನಮ್ಮ ಪರಂಪರೆ: ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಹಬ್ಬಗಳ ವೈಶಿಷ್ಟೃವಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯೂ ನಮ್ಮ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದರು.
ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ, ವಿಶ್ವ ಹಿಂದು ಪರಿಷತ್, ಚೈತನ್ಯ ನಗರ ನಿವಾಸಿಗಳ ಸಂಘ, ಸರಸ್ವತಿ ಮಹಿಳಾ ಮಂಡಳ ಸಂಘದ ಆಶ್ರಯದಲ್ಲಿ ಇಲ್ಲಿಯ ಅಕ್ಷಯ ಪಾರ್ಕ್ ಸಂತೆ ಮೈದಾನದಲ್ಲಿ ಗೆದ್ದ ತಂಡಗಳಿಗೆ ನಗದು ಬಹುಮಾನ ವಿತರಿಸಿ ಅವರು ಮಾತನಾಡಿದರು.
ಗಡಿಗೆ ಒಡೆಯುವುದು ಅಷ್ಟೊಂದು ಸುಲಭಸಾಧ್ಯವಲ್ಲ. ಬುದ್ದಿ, ಮನಸ್ಸು ಹಾಗೂ ದೇಹ ಏಕಾಗ್ರತೆಯಿಂದ ಕೂಡಿದ್ದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ. ಇಂಥ ಏಕಾಗ್ರತೆ ಮೂಡಿಸುವ ಕೆಲಸ ಮಾಡುತ್ತಿರುವ ಸಂಘ-ಸಂಸ್ಥೆಗಳಿಗೆ ವಂದನೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ದೊಡ್ಡ ಮೈದಾನದಲ್ಲಿ ನಡೆಸಬೇಕು. ಇದಕ್ಕೆ ಸಹಕಾರ ನೀಡುವುದಾಗಿ ಭರವಸೆ ಕೊಟ್ಟರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕ್ರೀಡಾಚಟುವಟಿಕೆಗಳೆಂದರೆ ಸೋಲು-ಗೆಲುವು ಸಾಮಾನ್ಯ. ಆದರೆ, ಭಾಗವಹಿಸಿ ಎಲ್ಲರಿಂದಲೂ ಭೇಷ್ ಎನಿಸಿಕೊಳ್ಳುವುದೇ ಸಂಭ್ರಮ. ಈ ಕ್ರೀಡಾಸ್ಫೂರ್ತಿ ನಿಮ್ಮೊಂದಿಗಿರಲಿ ಎಂದರು.
ರಾಧಾಕೃಷ್ಣ ವೇಷ ಧರಿಸಿದ್ದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮಕ್ಕೂ ಮೊದಲು ಅದ್ದೂರಿ ಮೆರವಣಿಗೆ ನಡೆಯಿತು.
ಉಪ ಮೇಯರ್ ದುರ್ಗಮ್ಮ ಬಿಜವಾಡ, ಪ್ರಮುಖರಾದ ಗೋವಿಂದ ಜೋಶಿ, ಪ್ರಕಾಶ ಕ್ಯಾರಕಟ್ಟಿ, ಕೃಷ್ಣ ಗಂಡಗಾಳೇಕರ, ವೆಂಕಟೇಶ ಕಾಟವೆ, ವಿನಾಯಕ ತಲಗೇರಿ, ಪ್ರದೀಪ ಕೆ. ಶೆಟ್ಟಿ, ಸುಭಾಷಸಿಂಗ್ ಜಮಾದಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net