

ತೂಬಗೆರೆ: ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ ಪ್ರಯುಕ್ತ ನಡೆದ ದನಗಳ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಉತ್ತಮ ರಾಸುಗಳ ಮಾಲೀಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಶನಿವಾರ ಬಹುಮಾನ ವಿತರಿಸಿದರು.
40 ರೈತರು ಉತ್ತಮ ರಾಸು ಪ್ರಶಸ್ತಿ ಪಡೆದರು, ಪ್ರಶಸ್ತಿ ಪಡೆದ ರೈತರಿಗೆ ಪ್ರಶಂಸಾ ಪತ್ರ ಮತ್ತು ಬೆಳ್ಳಿ ಚೆಂಬು ವಿತರಣೆ ಮಾಡಲಾಯಿತು.
ಹಾಲು ಹಲ್ಲಿನ ಹೋರಿಗಳಲ್ಲಿ ಪ್ರಥಮ ಬಹುಮಾನ ಹೊಸಕೋಟೆ ತಾಲೂಕಿನ ತರಬರಹಳ್ಳಿಯ ನಾರಾಯಣಸ್ವಾಮಿ, ಬಾಯಿ ಗೂಡಿದ ಜೋಡಿ ಎತ್ತುಗಳಲ್ಲಿ ಪ್ರಥಮ ಬಹುಮಾನ ದೇವನಹಳ್ಳಿ ತಾಲೂಕು ಚೆನ್ನಹಳ್ಳಿಯ ಮುನಿಯಪ್ಪ, ಹಾಲು ಹಲ್ಲಿನ ಜತೆ ಎತ್ತುಗಳಲ್ಲಿ ಪ್ರಥಮ ಬಹುಮಾನವಾಗಿ ಬೆಂ.ನಗರ ಜಿಲ್ಲೆಯ ಜಕ್ಕೂರಿನ ಜಶ್ವಂತ್, ಆರು ಹಲ್ಲಿನ ಜತೆ ಎತ್ತುಗಳಲ್ಲಿ ಪ್ರಥಮ ಬಹುಮಾನವಾಗಿ ದೇವನಹಳ್ಳಿ ತಾಲೂಕಿನ ವಿಜಯಪುರ ಹೋಬಳಿಯ ಆದರ್ಶ್, ನಾಲ್ಕು ಹಲ್ಲಿನ ಜೋಡಿ ಎತ್ತುಗಳಲ್ಲಿ ದೇವನಹಳ್ಳಿ ತಾಲೂಕಿನ ವಿಜಯಪುರ ಮಾನೆ ನಾರಾಯಣಪ್ಪ, ಆರು ಹಲ್ಲಿನ ಹೋರಿಗಳಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಗೆದ್ದಲಪಾಳ್ಯದ ಚಿಕ್ಕ ಮುನಿಯಪ್ಪ, ಎರಡು ಹಲ್ಲಿನ ಜತೆ ಎತ್ತುಗಳಲ್ಲಿ ದೇವನಹಳ್ಳಿ ಶ್ರೀನಿವಾಸ್ ಪ್ರಥಮ ಬಹುಮಾನ ಪಡೆದುಕೊಂಡರು.
ಮನವಿ ಸಲ್ಲಿಕೆ ದಕ್ಷಿಣ ಭಾರತದಲ್ಲೇ ಘಾಟಿ ದನಗಳ ಜಾತ್ರೆ ಪ್ರಸಿದ್ಧಿ ಪಡೆದಿದೆ, ಆದರೆ ಜಾತ್ರೆಗೆ ಬರುವ ದನಗಳಿಗೆ ಜಾಗ ಇಲ್ಲದಂತಾಗಿದ್ದು, ಖಾಸಗಿಯವರು ರೈತರಿಂದ ಜಮೀನನ್ನು ಕೊಳ್ಳುತ್ತಿರುವುದರಿಂದ ಜಾಗವೇ ಇಲ್ಲದಂತಾಗಿದೆ. ಹೀಗಾಗಿ ದನಗಳ ಜಾತ್ರೆಗೆ 100 ಎಕರೆ ಜಮೀನು ಮಂಜೂರು ಮಾಡುದಂತೆ ಸಚಿವ ಮುನಿಯಪ್ಪ ಅವರಿಗೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು.
ತಹಸೀಲ್ದಾರ್ ವಿಬಾ ವಿದ್ಯಾ ರಾಥೋಡ್, ದೊಡ್ಡಬಳ್ಳಾಪುರ ಕೃಷಿ ಸಮಾಜದ ಅಧ್ಯಕ್ಷ ಮುರಳಿ, ಜಿಪಂ ಮಾಜಿ ಸದಸ್ಯ ಅರವಿಂದ್, ತೂಬಗೆರೆ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ, ಘಾಟಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರಿಗಳ ಸದಸ್ಯ ಜಿ.ಎನ್.ರಂಗಪ್ಪ ಇದ್ದರು.
ಕಾಮಗಾರಿಗೆ ಸಚಿವ ಚಾಲನೆ: ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿ, ಮೇಳೇಕೋಟೆ ಗ್ರಾಮ, ಮೇಲಿನಜೂಗಾನಹಳ್ಳಿ(ಎಸ್‌ಎಸ್ ಘಾಟಿ) ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 2.17 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಕೆ.ಎಚ್.ಮುನಿಯಪ್ಪ ಚಾಲನೆ ನೀಡಿದರು. ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 161.98 ಲಕ್ಷ ರೂಗಳ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ, ಸಿಸಿ ರಸ್ತೆ, ಚರಂಡಿ, ಅಂಗನವಾಡಿ ದುರಸ್ತಿ, ನೂತನ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಮೆಳೇಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ 21 ಲಕ್ಷ ರೂ.ಗಳ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ, ಎನ್‌ಆರ್‌ಎಲ್ಎಂ ಭವನದಲ್ಲಿ ಅಂಗವಿಕಲರ ಉಪಯೋಗಕ್ಕಾಗಿ ರ‌್ಯಾಂಪ್ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಮೇಲಿನಜೂಗಾನಹಳ್ಳಿ(ಎಸ್‌ಎಸ್ ಘಾಟಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 34.99 ಲಕ್ಷ ರೂ.ಗಳ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕ ಯಂತ್ರೋಪಕರಣ ಅಳವಡಿಕೆಗೆ ಚಾಲನೆ ನೀಡಿದರು. ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಂಗಣ್ಣ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಜಗದೀಶ್ ಇದ್ದರು.