

ಬೆಂಗಳೂರು: ಭಾರತೀಯ ವಿಶ್ವವಿದ್ಯಾಲಯಗಳ ಸಂಘವು (ಎಐಯು) ನೋಯ್ಡದಲ್ಲಿ ಆಯೋಜಿಸಿದ್ದ 38ನೇ ರಾಷ್ಟ್ರಮಟ್ಟದ ಅಂತರ್‌ವಿಶ್ವವಿದ್ಯಾಲಯ ಯುವಜನಮೇಳದಲ್ಲಿ ಬೆಂಗಳೂರಿನ ರೇವಾ ವಿಶ್ವವಿದ್ಯಾಲಯವು ಐದು ರಾಷ್ಟ್ರೀಯ ಪ್ರಶಸ್ತಿ(Rewa University wins national awards)ಗಳನ್ನು ಮುಡಿಗೇರಿಸಿಕೊಂಡು ಗಮನಾರ್ಹ ಸಾಧನೆ ಮಾಡಿದೆ.
ಸೌತ್-ಈಸ್ಟ್ ಜೋನ್‌ನಲ್ಲಿ ವಿಜೇತರಾಗಿ ರಾಷ್ಟ್ರಮಟ್ಟದ ಯುವಜನ ಮೇಳದ ಸ್ಪರ್ಧೆಗಳಲ್ಲಿ ಭಾಗವಹಿಸಿದ ರೇವಾ ವಿದ್ಯಾರ್ಥಿಗಳ ತಂಡ ಒಟ್ಟು ಐದು ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ಏಕಾಂಕ ನಾಟಕ ಹಾಗೂ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ, ವೆಸ್ಟರ್ನ್ ಗ್ರ್ರೂಪ್ ಸಿಂಗಿಂಗ್‌ನಲ್ಲಿ ದ್ವಿತೀಯ, ಕಿರುನಾಟಕದಲ್ಲಿ ತೃತೀಯ ಹಾಗೂ ವೆಸ್ಟರ್ನ್ ಸೊಲೋ ಸಿಂಗಿಂಗ್‌ನಲ್ಲಿ ಐದನೇ ಸ್ಥಾನವನ್ನು ರೇವಾ ವಿದ್ಯಾರ್ಥಿಗಳು ಪಡೆದಿದ್ದಾರೆ.
ರಂಗಭೂಮಿ ವಿಭಾಗದಲ್ಲಿ ರೇವಾ ತಂಡವು ರಚಿಸಿ ಅಭಿನಯಿಸಿದ ಕುವೆಂಪು ವಿರಚಿತ ಶ್ರೀ ರಾಮಾಯಣ ದರ್ಶನಂ ಆಧಾರಿತ ‘ಪಂಚವಟಿ’ ಏಕಾಂಕ ನಾಟಕವು ಅದ್ಭುತ ಪ್ರಸ್ತುತಿಯಿಂದಾಗಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಪ್ರಶಸ್ತಿಯ ಗೌರವಕ್ಕೆ ಭಾಜನವಾಗಿದೆ.
ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ ರೇವಾ ವಿದ್ಯಾರ್ಥಿನಿ ಪ್ರಸ್ತುತಪಡಿಸಿದ ಸಂತ ನಾರಾಯಣತೀರ್ಥ ವಿರಚಿತ ‘ಕೃಷ್ಣಲೀಲಾ ತರಂಗಿಣಿ’ ಕೂಚುಪುಡಿ ಶಾಸ್ತ್ರೀಯ ನೃತ್ಯ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಗೆದ್ದುಕೊಂಡಿದೆ. ಕಿರುನಾಟಕ ವಿಭಾಗದಲ್ಲಿ ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ಜಮುನಾ ಅವರ ಜೀವನಾಧಾರಿತ ‘ಜಮುನಾ ಟು ಡು: ಲೇಡಿ ಟಾರ್ಜನ್’ ಕಿರುನಾಟಕವು ತನ್ನ ಅಪರೂಪದ ಕಥಾ ಎಳೆಯಿಂದಾಗಿ ರಾಷ್ಟ್ರಮಟ್ಟದ ತೃತೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ರೇವಾ ವಿದ್ಯಾರ್ಥಿಗಳೇ ಬರೆದು ವಿನೂತನ ಶೈಲಿಯಲ್ಲಿ ಸಂಯೋಜಿಸಿದ ಗೀತೆಗಳು
ವೆಸ್ಟರ್ನ್ ಗ್ರ್ರೂಪ್ ಹಾಗೂ ಸೊಲೋ ಸಿಂಗಿಂಗ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಕ್ರಮವಾಗಿ ದ್ವಿತೀಯ ಹಾಗೂ ಐದನೇ ಸ್ಥಾನ ಪಡೆದುಕೊಂಡಿವೆ.
ಉತ್ತರಪ್ರದೇಶದ ನೋಯ್ಡದ ಅಮಿಟಿ ವಿಶ್ವವಿದ್ಯಾನಿಲಯದಲ್ಲಿಮಾರ್ಚ್ 3ರಿಂದ 6ರವರೆಗೆ ನಡೆದ 38ನೇ ರಾಷ್ಟ್ರಮಟ್ಟದ ಅಂತರ್‌ವಿಶ್ವವಿದ್ಯಾಲಯ ಯುವಜನಮೇಳದಲ್ಲಿ ಭಾರತದಾದ್ಯಂತದ 8 ವಲಯಗಳಲ್ಲಿ ವಿಜೇತರಾದ 148 ವಿಶ್ವವಿದ್ಯಾಲಯಗಳ ಒಟ್ಟು 2407 ವಿದ್ಯಾರ್ಥಿಗಳು ಭಾಗವಹಿಸಿದ್ದರು.