

ಚಿತ್ರದುರ್ಗ: ಕ್ರಾಂತಿಕಾರಿ ಗದ್ದರ್ ಅವರ ಹೋರಾಟದ ಹಾಡುಗಳು ಎಂದೆಂದಿಗೂ ಅವಿಸ್ಮರಣೀಯ ಎಂದು ಚಿಂತಕ ಜೆ.ಯಾದವರೆಡ್ಡಿ ಹೇಳಿದರು.
ಜಂಬೂ ದ್ವೀಪ ಕರ್ನಾಟಕ, ಮಹಾತ್ಮಪುಲೆ ಅಧ್ಯಯನ ಕೇಂದ್ರ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್‌ನಿಂದ ಕ್ರೀಡಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ರಾಂತಿಕಾರಿ ಗದ್ದರ್ ಅವರಿಗೆ ನುಡಿಹಾಡು ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಸಮೂಹ ಗದ್ದರ್ ಆದರ್ಶ ಪಾಲಿಸಬೇಕು. ಅವರ ಹೋರಾಟದ ಮಾರ್ಗ ಅನುಸರಿಸಿದಾಗ ಮಾತ್ರ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಸಲಹೆ ನೀಡಿದರು.
ಸಂಘಟಕ ಡಾ.ಬಿ.ಎಂ.ಗುರುನಾಥ್ ಮಾತನಾಡಿ, ಗಟ್ಟಿ ಧ್ವನಿಯ ಗದ್ದರ್ ಕೇಂದ್ರ ಸರ್ಕಾರದ ಹುದ್ದೆ ತ್ಯಜಿಸಿ, ಬಡವರಿಗಾಗಿ ಬರಿ ಹೊಟ್ಟೆಯಲ್ಲಿ ನಡೆದಾಡಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ನಿಂತಲ್ಲೆ ಗೆಜ್ಜೆಕಟ್ಟಿ ಕುಣಿದು ಹಾಡುತ್ತಿದ್ದ ಅವರು ದೇಶದ ಅಸಮಾನತೆ, ವಾಸ್ತವತೆ ತೆರೆದಿಟ್ಟರು. ತಳಸಮುದಾಯದ ಪ್ರಗತಿ, ಜಾತಿವಾದಿ ಭೂ ಮಾಲೀಕರ ವಿರುದ್ಧ ಸಿಡಿದೆದ್ದರು. ಆಂಧ್ರ, ಕರ್ನಾಟಕವಷ್ಟೇ ಅಲ್ಲದೆ, ಇಡೀ ದೇಶದಲ್ಲಿಯೇ ಕ್ರಾಂತಿ ಹಾಡುಗಳಿಂದಲೇ ಹೆಸರಾದವರು ಎಂದು ನೆನಪಿಸಿಕೊಂಡರು.
ನಿವೃತ್ತ ಪ್ರಾಚಾರ್ಯ ಡಾ.ಅಶೋಕ್‌ಕುಮಾರ್ ಸಂಗೇನಹಳ್ಳಿ ಮಾತನಾಡಿ, ಕ್ರಾಂತಿಕಾರಿ ಹಾಡುಗಳ ಮೂಲಕ ಲಕ್ಷಾಂತರ ಜನರ ಮನಸ್ಸಿನಲ್ಲಿ ಉಳಿದಿರುವ ಗದ್ದರ್ ಹೋರಾಟಕ್ಕೆ ಸ್ಪೂರ್ತಿಯಾಗಿದ್ದಾರೆ ಎಂದು ಸ್ಮರಿಸಿದರು.
ದಸಂಸ ಅಧ್ಯಕ್ಷ ಕುಂಚಿಗನಹಾಳ್ ಮಹಾಲಿಂಗಪ್ಪ, ಪ್ರಾಚಾರ್ಯ ಬಿ.ಕೃಷ್ಣಪ್ಪ, ಶಿವಕುಮಾರ್, ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಸಿಂಧನೂರು ಪ್ರಧಾನ ಗಾಯಕ ಡಾ.ಬಿ.ಎಂ.ಪುಟ್ಟಯ್ಯ, ಅಧ್ಯಯನ ಕೇಂದ್ರದ ಅಧ್ಯಕ್ಷ ರಾಮಣ್ಣ, ತಿಪ್ಪೇಸ್ವಾಮಿ ಕೆರೆಯಾಗಲಹಳ್ಳಿ ಇತರರಿದ್ದರು.