

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಯಾವುದೇ ನದಿಮೂಲಗಳಿಲ್ಲವಾದ್ದರಿಂದ ನೀರಿನ ಸಮಸ್ಯೆ ನೀಗಿಸಲು, ಅಂತರ್ಜಲಮಟ್ಟ ಹೆಚ್ಚಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಜಿಲ್ಲೆಯಲ್ಲಿರುವ ಕೆರೆಗಳ ಅಂಗಳದಲ್ಲಿ ಬೆಳೆದಿರುವ ಮರಗಳನ್ನು ತೆರವುಗೊಳಿಸಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸೂಚಿಸಿದರು.
ದೇವನಹಳ್ಳಿಯ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಎಲ್ಲ ಕೆರೆಗಳ ಅಂಗಳದಲ್ಲಿ ಬೆಳೆದಿರುವ ಜಾಲಿ ಮರಗಳನ್ನು ಹರಾಜು ಪ್ರಕ್ರಿಯೆ ಮೂಲಕ ತೆರವುಗೊಳಿಸಿ, ಅದರಿಂದ ಬರುವ ಆದಾಯವನ್ನು ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಸರ್ಕಾರಕ್ಕೆ ಸಂದಾಯ ಮಾಡಬೇಕು. ತೆರಿಗೆ ಹೊರತುಪಡಿಸಿ ಆದಾಯವನ್ನು ಹೂಳು ತೆಗೆಯುವಿಕೆ, ಕೆರೆಗಳ ಸಂರಕ್ಷಣೆಗೆ ನೀಡಲು ಸಣ್ಣ ನೀರಾವರಿ, ಅರಣ್ಯ, ಪಂಚಾಯಿತಿ ಅಧಿಕಾರಿಗಳು ಸಮನ್ವಯ ಸಾಧಿಸಿ ವೈಜ್ಞಾನಿಕವಾಗಿ ರೂಪುರೇಷೆ ಸಿದ್ಧಪಡಿಸಿ, ಯೋಜನಾಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಾಗ ನೀಡಲಾಗಿದ್ದು, ಜನರಿಗೆ ತೊಂದರೆಯಾಗದಂತೆ ಸ್ಥಳೀಯ ಸಂಸ್ಥೆಗಳು ಅಗತ್ಯ ಕ್ರಮ ಕೈಗೊಂಡು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ದೊಡ್ಡಬಳ್ಳಾಪುರದ ನಾಗರಕೆರೆಗೆ, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕಲುಷಿತ ನೀರು ಹಾಗೂ ದೊಡ್ಡಬಳ್ಳಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಒಳಚರಂಡಿ ನೀರು ಸೇರಿ ಆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕೆರೆಯನ್ನು ಸಂರಕ್ಷಿಸಲು ಕಲುಷಿತ ನೀರು ಬರದಂತೆ ತಡೆಯಲು, ನೀರನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲು ಯೋಜನೆ ರೂಪಿಸಿ, ಶೀಘ್ರ ವರದಿ ನೀಡಬೇಕು ಎಂದು ಸೂಚಿಸಿದರು.
ತಿಂಗಳೊಳಗೆ ಸಮಸ್ಯೆ ಬಗೆಹರಿಸಿ: ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಿಗದಿಯಾಗಿರುವ ಸ್ಮಶಾನ ಭೂಮಿಯನ್ನು ಸಂಪರ್ಕಿಸುವ ರಸ್ತೆಗಳಿಲ್ಲದಿರುವುದು ಕಂಡುಬಂದಿದೆ. ಆಯಾ ತಾಲೂಕಿನ ತಹಸೀಲ್ದಾರ್ ಹಾಗೂ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಿಂಗಳ ಒಳಗಾಗಿ ಸಮಸ್ಯೆ ಬಗೆಹರಿಸಿ ವರದಿ ನೀಡಿ ಎಂದು ಎಂದು ಸಚಿವರು ಸೂಚಿಸಿದರು.