

ವಿಜಯವಾಣಿ ಸುದ್ದಿಜಾಲ ಕುಣಿಗಲ್
ತಾಲೂಕಿನಾದ್ಯಂತ ಸುರಿದ ಉತ್ತಮ ಮಳೆಗೆ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಅದರಂತೆ ಮೂಡಲ್ ಕುಣಿಗಲ್ ಕೆರೆಗೆ ಮಳೆ ನೀರಿನಿಂದ ಮರುಜೀವ ಬಂದಿದ್ದು, ಜನರನ್ನು ತನ್ನತ್ತ ಸೆಳೆಯುತ್ತಿದೆ.
ಐತಿಹಾಸಿಕ ಪರಂಪರೆಯ ಮೂಡಲ್ ಕುಣಿಗಲ್ ಕೆರೆ ನೋಡೋಕೊಂದು ಐಭೋಗ, ಮೂಡಿ ಬತ್ತಾನೆ ಚಂದಿರಾಮ ಎಂಬ ನಾಣ್ಣುಡಿಯಂತೆ ದೊಡ್ಡಕೆರೆಯು ಕೋಡಿ ಬಿದ್ದಿದ್ದು, ಪ್ರತಿ ನಿತ್ಯ ಸಹಸ್ರಾರು ಜನರು ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಸೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಮೆರುಗು ತುಂಬುವ ನಿಟ್ಟಿನಲ್ಲಿ ಶಾಸಕ ಡಾ.ಎಚ್.ಡಿ.ರಂಗನಾಥ್ ಅವರು ಕೆರೆ ಕೋಡಿಗೆ ವಿದ್ಯುತ್ ಅಲಂಕಾರ ಮಾಡಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ರಾಜ್ಯದ ದೊಡ್ಡಕೆರೆಗಳಲ್ಲಿ ಒಂದಾದ ಕುಣಿಗಲ್ ಕೆರೆಯು ಐದು ಮತ್ತು ಆರನೇ ಶತಮಾನದ ಇತಿಹಾಸ ಹೊಂದಿದೆ. 20&30 ವರ್ಷಗಳ ಹಿಂದೆ ಶಿವಗಂಗೆ ಬೆಟ್ಟ, ನೇರಳೆ ಕೆರೆ, ಸಂಕೀಘಟ್ಟ ಕೆರೆ, ತಿಪ್ಪಸಂದ್ರ ಕೆರೆ ಸೇರಿದಂತೆ ಮೊದಲಾದ ಕೆರೆ ತುಂಬಿ ಕುಣಿಗಲ್ ದೊಡ್ಡಕೆರೆಗೆ ಹರಿದು ಬರುತ್ತಿದ್ದವು. ಹೀಗಾಗಿ ಕುಣಿಗಲ್ ಕೆರೆಯು ಸದಾ ತುಂಬಿ ಕೋಡಿ ಬೀಳುತ್ತಿತ್ತು. ಆದರೆ, ಬದಲಾದ ವ್ಯವಸ್ಥೆಯಿಂದ ವಿವಿಧ ಕೆರೆಗಳಿದ ಕುಣಿಗಲ್ ದೊಡ್ಡಕೆರೆಗೆ ಹರಿಯಬೇಕಾದ ಒಳ ಹರಿವಿನ ಪ್ರಮಾಣ ಕಡಿಮೆಯಾಗಿ ತನ್ನ ಐತಿಹಾಸಿಕ ಪರಂಪರೆ ಕಳೆದುಕೊಳ್ಳುತ್ತಿದೆ. ಆದರೆ, ಮಾಜಿ ಸಚಿವರಾದ ಎನ್.ಹುಚ್ಚಮಾಸ್ತಿಗೌಡ, ವೈ.ಕೆ.ರಾಮಯ್ಯ, ಡಿ.ನಾಗರಾಜಯ್ಯ, ಮಾಜಿ ಶಾಸಕರಾದ ಎಸ್.ಪಿ.ಮುದ್ದಹನುಮೇಗೌಡ, ಎಚ್.ನಿಂಗಪ್ಪ, ಬಿ.ಬಿ.ರಾಮಸ್ವಾಮಿಗೌಡ, ಶಾಸಕ ಡಾ.ಎಚ್.ಡಿ.ರಂಗನಾಥ್ ಅವರ ಶ್ರಮದಿಂದ ಕುಣಿಗಲ್ ದೊಡ್ಡಕೆರೆಗೆ ಹೇಮಾವತಿ ನೀರು ತಾಲೂಕಿನಾದ್ಯಂತ ಕೆರೆಕಟ್ಟೆಗಳಿಗೆ ಹರಿದು ಜನ ಜಾನುವಾರಗಳ ಕುಡಿಯುವ ನೀರು ಮತ್ತು ರೈತರ ಬೆಳೆಗೆ ಅನುಕೂಲವಾಗಿದೆ.
ಕಳೆದ 20 ವರ್ಷಗಳ ಹಿಂದೆ ಹೋರಾಟದ ಮೂಲಕ ಕುಣಿಗಲ್ ದೊಡ್ಡಕೆರೆಗೆ ಹೇಮಾವತಿ ನೀರು ಹರಿಸಬೇಕಿತ್ತು. ಆದರೆ, ಬಿ.ಬಿ.ರಾಮಸ್ವಾಮಿಗೌಡ ಮತ್ತು ಹಾಲಿ ಶಾಸಕ ರಂಗನಾಥ್ ಅವರ ಅವಧಿಯಲ್ಲಿ ನಿರಂತರವಾಗಿ ನೀರು ಹರಿಸುತ್ತಿರುವುದರಿಂದ ದೊಡ್ಡಕೆರೆಗೆ ಕಳೆ ಬಂದಿದೆ. ಈಗ ಶಾಸಕ ಡಾ.ರಂಗನಾಥ್ ಅವರು ಕೆರೆ ಕೋಡಿಗೆ ಸ್ವಂತ ಹಣದಿಂದ ವಿದ್ಯುತ್ ದೀಪ ಅಳವಡಿಸಿ ಕೆರೆ ಕೋಡಿಯ ವೈಭವ ಹೆಚ್ಚಿಸಿರುವುದು ನಾಗರಿಕರ ಪ್ರಶಂಸೆಗೆ ಪಾತ್ರವಾಗಿದೆ. ಈ ವೈಭವ ಮುಂದಿನ ಭಾನುವಾರದವರೆಗೆ ಮುಂದುವರೆಯಲಿದೆ.| ಬೇಗೂರು ನಾರಾಯಣ್, ತುಮುಲ್ ನಿರ್ದೇಶಕ