

ಅವಿನಾಶ್ ಜೈನಹಳ್ಳಿ ಮೈಸೂರು
ಸಾಂಸ್ಕತಿಕ ನಗರಿ ಮೈಸೂರಿನಂತಹ ಭವ್ಯ ಪರಂಪರೆಯುಳ್ಳ ಸ್ಥಳದಲ್ಲಿ ಫಿಲಂ ಸಿಟಿ ಸ್ಥಾಪನೆ ಆಗಬೇಕು ಎನ್ನುವ ಕನಸಿಗೆ ಮತ್ತೆ ಜೀವ ಬಂದಿದೆ.
ನೂರು ವಸಂತಗಳ ಹತ್ತಿರಕ್ಕೆ ಹೋಗುತ್ತಿರುವ ಕನ್ನಡ ಚಿತ್ರರಂಗಕ್ಕೆ ತನ್ನದೇ ನೆಲದಲ್ಲಿ ಶಾಶ್ವತ ಚಿತ್ರನಗರಿ ಸ್ಥಾಪನೆಯಾಗಿಲ್ಲ ಎನ್ನುವ ಕೊರಗು ಅಸಂಖ್ಯ ಚಿತ್ರಪ್ರೇಮಿಗಳನ್ನು ಕಾಡುತ್ತಿರುವ ಹೊತ್ತಿನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲೇ ಫಿಲಂ ಸಿಟಿ ನಿರ್ಮಾಣ ಮಾಡುತ್ತೇವೆ ಎಂದು ಬಹಳ ವಿಶ್ವಾಸದಿಂದ ಹೇಳಿರುವುದು ಆಶಾಭಾವ ಮೂಡಿಸಿದೆ.
ದೇಶದಲ್ಲಿ ಸಿನಿಮಾಗಳ ನಿರ್ಮಾಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ವರ್ಷಕ್ಕೆ ಸರಾಸರಿ 450 ಚಿತ್ರಗಳು ನಿರ್ಮಾಣವಾಗುತ್ತವೆ. 1970ರ ದಶಕದಲ್ಲಿ ಬೆಂಗಳೂರಿನಲ್ಲಿ ಫಿಲಂ ಸ್ಟುಡಿಯೋ ನಿರ್ಮಾಣ ಮಾಡಲಾಯಿತು. ದಶಕಗಳ ಬಳಿಕ ಫಿಲಂ ಸಿಟಿ ಕನಸು ಗರಿಗೆದರಿತು. ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗಲೂ ಮೈಸೂರು ಜಿಲ್ಲೆಯಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಲಾಗುವುದೆಂದು ಘೋಷಣೆ ಮಾಡಿದ್ದರು. ಬಿಜೆಪಿ ಸರ್ಕಾರ 2020-21ನೇ ಸಾಲಿನ ಬಜೆಟ್‌ನಲ್ಲೂ ಖಾಸಗಿ ಸಹಭಾಗಿತ್ವದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಫಿಲಂ ಸಿಟಿ ನಿರ್ಮಿಸುವುದಾಗಿ ಘೋಷಣೆ ಮಾಡಿತ್ತು. ತದನಂತರ ನನೆಗುದಿಗೆ ಬಿದ್ದಿತು.
ನೆರೆಯ ತೆಲಂಗಾಣದ ಹೈದರಾಬಾದ್‌ನಲ್ಲಿ ಫಿಲಂ ಸಿಟಿ ಇದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಚಿತ್ರನಗರಿ ನಿರ್ಮಿಸಬೇಕೆಂಬುದು ಡಾ.ರಾಜ್‌ಕುಮಾರ್ ಅವರ ಕನಸಾಗಿತ್ತು. ಇದಕ್ಕಾಗಿ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಮುಖ್ಯವಾಗಿ ರಾಜ್‌ಕುಮಾರ್ ಕೂಡ ಮೈಸೂರಿನಲ್ಲೇ ಫಿಲಂ ಸಿಟಿ ಸ್ಥಾಪಿಸುವಂತೆ ಒತ್ತಾಯಿಸಿದ್ದು ಈಗ ಇತಿಹಾಸ.
ಅನ್ಯಭಾಷೆಯ ಚಿತ್ರಗಳು ಕೆಲ ದಶಕಗಳ ಹಿಂದೆಯೇ ಸಂಪೂರ್ಣವಾಗಿ ಚಿತ್ರನಗರಿಯಲ್ಲೇ ತಯಾರಾಗಿ ಬೆಳ್ಳಿತೆರೆಗೆ ಬರುತ್ತಿದ್ದರೆ, ಕನ್ನಡ ಸಿನಿಮಾ ಕ್ಷೇತ್ರವೂ ಈಗಲೂ ಪ್ರತಿಯೊಂದಕ್ಕೂ ಅತ್ತಿಂದಿತ್ತ ಅಲೆಯುತ್ತಾ ಚಲನಚಿತ್ರಗಳನ್ನು ತಯಾರು ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರನಗರಿ ಸ್ಥಾಪನೆಯಾಗಲೇಬೇಕು ಎಂದು ಅನೇಕ ನಿರ್ದೇಶಕರು, ನಿರ್ಮಾಪಕರು ಕಲಾವಿದರು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದರು.
ಕನ್ನಡ ಚಿತ್ರರಂಗಕ್ಕೆ ಚಿತ್ರನಗರಿ ಅವಶ್ಯಕತೆ ಇದೆ ಎನ್ನುವ ವಿಷಯವು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ 1980ರಲ್ಲೇ ಮುನ್ನೆಲೆಗೆ ಬಂದಿತ್ತು. ಬಂದಷ್ಟೇ ವೇಗವಾಗಿ ಕಣ್ಮರೆಯಾಯಿತು. 2004ರಲ್ಲಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಮತ್ತೆ ಫಿಲಂ ಸಿಟಿ ವಿಷಯಕ್ಕೆ ರೆಕ್ಕೆ ಮೂಡಿ ಕೆಲ ದಿನ ಎಲ್ಲ ಕಡೆ ಓಡಾಡಿತು. ಕೊನೆಗೆ ಮೂಲೆ ಸೇರಿತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2017ರಲ್ಲಿ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಗೆ ಜಾಗ ಗುರುತಿಸಿತು. 2018ರಲ್ಲಿ ಸಮ್ಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದ ಎಚ್.ಡಿ.ಕುಮಾರಸ್ವಾಮಿ ಅದನ್ನು ರಾಮನಗರಕ್ಕೆ ಸ್ಥಳಾಂತರ ಮಾಡಿದರು. 2019ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಚಿತ್ರನಗರಿಯನ್ನು ಹೆಸರಘಟ್ಟದಲ್ಲಿ ಇರುವ ದೇವಿಕಾ ರಾಣಿ ರೋರಿಕ್ ಎಸ್ಟೇಟ್‌ನಲ್ಲಿ ಸ್ಥಾಪನೆ ಮಾಡಬೇಕು ಎನ್ನುವ ಆಶಯದೊಂದಿಗೆ 500 ಕೋಟಿ ರೂ. ಗಳನ್ನು ಘೋಷಣೆ ಮಾಡಿತು. ಈ ಯೋಜನೆ ಸುತ್ತಿಬಳಿಸಿ ಮೈಸೂರಿನ ಹಿಮ್ಮಾವಿಗೆ ಮತ್ತೆ ವಾಪಸ್ ಆಯಿತು.
ಒಂದು ಸಿನಿಮಾ ತಯಾರಾಗಿ ಪ್ರೇಕ್ಷಕರನ್ನು ತಲುಪುವ ಹೊತ್ತಿಗೆ ಅನೇಕ ಹಂತಗಳನ್ನು ದಾಟಿ ಬರಬೇಕು. ದೃಶ್ಯಗಳ ಚಿತ್ರೀಕರಣ, ಡೈಲಾಗ್, ಹಾಡುಗಳ ಧ್ವನಿ ಮುದ್ರಣ, ಸಂಗೀತದ ಮರು ಸಂಯೋಜನೆ, ಸಂಕಲನ ಕಾರ್ಯಗಳು ಆಗಬೇಕು. ಆಧುನಿಕ ತಂತ್ರಜ್ಞಾನ ಬಳಕೆಗೆ ಬಂದ ಬಳಿಕ ಡಿಟಿಎಸ್, ಡಾಲ್ಬಿ ಸೌಂಡ್ಸ್ ಎಫೆಕ್ಟ್, ಆ್ಯನಿಮೇಷನ್, ಗ್ರಾಫಿಕ್ಸ್, ಗ್ರೀನ್ ಮ್ಯಾಟ್ಸ್ ಮುಂತಾದ ಸಿನಿಮಾಗಳಿಗೆ ಕಡ್ಡಾಯವಾಗಿ ಬೇಕೇಬೇಕು ಎನ್ನುವ ವಾತಾವರಣ ನಿರ್ಮಾಣವಾಗಿ ಬಿಟ್ಟಿದೆ. ಇವು ಎಲ್ಲವೂ ಒಂದೇ ಕಡೆ ದೊರಕಲು ಚಿತ್ರನಗರಿ ಅವಶ್ಯಕ ಎನ್ನುತ್ತಾರೆ ಸಿನಿಮಾ ತಂತ್ರಜ್ಞರು.
ಮೈಸೂರಿಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಸೇರಿದಂತೆ ನಾನಾ ಪ್ರವಾಸಿ ತಾಣಗಳನ್ನು ನೋಡುತ್ತಾರೆ. ಫಿಲಂ ಸಿಟಿ ಸ್ಥಾಪನೆ ಮಾಡಿದರೆ ಸ್ಥಳೀಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಚೈತನ್ಯ ದೊರೆಯಲಿದೆ. ಈ ಎಲ್ಲ ಕಾರಣಗಳಿಂದ ಈ ಕುರಿತು ತ್ವರಿತ ಕ್ರಮ ವಹಿಸಬೇಕು ಎಂಬ ಒತ್ತಾಯ ಇತ್ತು. ಇದೀಗ ಈಗ ಮುಖ್ಯಮಂತ್ರಿ ಅವರು ಹೇಳಿರುವುದರಿಂದ ಸ್ಯಾಂಡಲ್‌ವುಡ್‌ನಲ್ಲಿ ಅಶಾಭಾವನೆ ಚಿಗುರಿದೆ. ಮೈಸೂರಿನ ಎಲ್ಲರ ಕನಸಿಗೆ ಪುಷ್ಟಿ ನೀಡಿದಂತಾಗಿದೆ.
ಸಿನಿಮಾಗಳ ಚಿತ್ರೀಕರಣಕ್ಕೆ ಮೈಸೂರು ನೆಚ್ಚಿನ ತಾಣವಾಗಿದೆ. ಇಲ್ಲಿನ ಸುತ್ತಮುತ್ತಲ ನೂರಕ್ಕೂ ಹೆಚ್ಚು ತಾಣಗಳಲ್ಲಿ ಕನ್ನಡ ಸೇರಿದಂತೆ ಬಹುತೇಕ ಭಾಷೆಯ ನೂರಾರು ಚಿತ್ರಗಳ ಚಿತ್ರೀಕರಣ ನಡೆದಿದೆ.
ವಿಶ್ವ ವಿಖ್ಯಾತ ಅಂಬಾವಿಲಾಸ ಅರಮನೆ, ಜಗನ್ಮೋಹನ ಅರಮನೆ, ಜಯಲಕ್ಷ್ಮೀವಿಲಾಸ ಸೇರಿದಂತೆ ಹತ್ತಾರು ಅರಮನೆಗಳಿವೆ. ಚಾಮುಂಡಿಬೆಟ್ಟ, ಕುಕ್ಕರಹಳ್ಳಿ ಕೆರೆ, ಲಿಂಗಾಂಬುದಿಕೆರೆ, ಕಾರಂಜಿ ಕೆರೆ, ಮೃಗಾಲಯ, ರೀಜನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ, ಸರ್ಕಾರಿ ಗಂಧದ ಎಣ್ಣೆ ಕಾರ್ಖಾನೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಕಬಿನಿ, ಕೆಆರ್‌ಎಸ್ ಅಣೆಕಟ್ಟೆ, ಸಮೀಪದ ಬೈಲಕುಪ್ಪೆ, ಶ್ರೀರಂಗಪಟ್ಟಣ, ನಂಜನಗೂಡು ಮತ್ತು ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯಗಳು ವಿಶ್ವದ ಗಮನ ಸೆಳೆಯುತ್ತಿದ್ದು, ಚಿತ್ರೀಕರಣಕ್ಕೆ ಅತ್ಯುತ್ತಮ ತಾಣಗಳಾಗಿವೆ.
ಮೈಸೂರು ನೈಸರ್ಗಿಕವಾಗಿಯೇ ಒಂದು ಫಿಲಂ ಸಿಟಿ. ಅಲ್ಲಿ ಚಿತ್ರನಗರಿ ಸ್ಥಾಪನೆಯಾದರೆ ಎಲ್ಲ ದೃಷ್ಟಿಯಿಂದಲೂ ಬಹಳ ಅನುಕೂಲ. ಇಲ್ಲಿ ಬೇಕಾಷ್ಟು ಲೊಕೇಶನ್‌ಗಳಿವೆ. ಹಳೆಯ ಕಾಲದ ಮನೆಗಳು, ಅರಮನೆ, ಹೊಸ ಮಾದರಿಯ ಆಧುನಿಕ ಜೀವನ ಶೈಲಿಯ ಚಿತ್ರಣಗಳು ಎಲ್ಲವೂ ಮೈಸೂರಿನಲ್ಲಿ ಸಿಗುತ್ತದೆ. ಇದರಿಂದ ಒಂದು ಸಿನಿಮಾವನ್ನು ಪೂರ್ಣವಾಗಿ ಸಿದ್ಧಮಾಡಿಕೊಳ್ಳುವ ಅವಕಾಶವಿರುತ್ತದೆ.-ಡಾರ್ಲಿಂಗ್ ಕೃಷ್ಣ, ನಾಯಕ ನಟ, ನಿರ್ದೇಶಕ