ಅಮೇಜಿಂಗ್ ಪೆಟ್ ಪ್ಲಾನೆಟ್‌ನಿಂದ ಕುದುರೆಗೆ ಮರುಜೀವ

animal planet
ಶಿವಮೊಗ್ಗದಲ್ಲಿ ಗಾಯಗೊಂಡ ಕುದುರೆಗೆ ಶಿರಸಿಯಲ್ಲಿ ಚಿಕಿತ್ಸೆ ನೀಡುತ್ತಿರುವುದು.
Published on

ಶಿವಮೊಗ್ಗ: ನಗರದ ಆಲ್ಕೊಳ ವೃತ್ತದ ಬಳಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕುದುರೆಗೆ ಶಿರಸಿಯ ಅಮೇಜಿಂಗ್ ಪೆಟ್ ಪ್ಲಾನೆಟ್ ಸೆಂಟರ್ ಮರುಜನ್ಮ ನೀಡಿದೆ. ಇದುವರೆಗೆ ನೂರಾರು ಪ್ರಾಣಿ ಪಕ್ಷಿಗಳನ್ನು ಉಪಚರಿಸಿ ಪ್ರಾಣ ಉಳಿಸಿದ ಕೇಂದ್ರ ಮುಖ್ಯಸ್ಥೆ ಪೂಜಾ ರಾಜ್ ಹಾಗೂ ಡಾ. ರಾಜೇಂದ್ರ ಅವರು ಶಿವಮೊಗ್ಗದ ಬಿಡಾಡಿ ಕುದುರೆ ಹಾಗೂ ಅದರ ಗರ್ಭದಲ್ಲಿರುವ ಮರಿಯನ್ನು ಉಳಿಸಿದ್ದಾರೆ.

ಆ.17ರಂದು ಆಲ್ಕೊಳ ವೃತ್ತದಲ್ಲಿ ಗಂಭೀರವಾಗಿ ಗಾಯಗೊಂಡ ಕುದುರೆಯೊಂದು ಒದ್ದಾಡುತ್ತಿತ್ತು. ಪ್ರಾಣಿಪ್ರಿಯರಾದ ಶಿವಮೊಗ್ಗದ ನಾಗರತ್ನ ರಾವ್, ನೆಲ್ಸನ್ ಡಿಸೋಜ ಹಾಗೂ ಯಶವಂತ್ ಎಂಬುವವರು ಇಲ್ಲಿಯೇ ಕುದುರೆಗೆ ಚಿಕಿತ್ಸೆ ಕೊಡಿಸಲು ಎಲ್ಲ ರೀತಿಯ ಪ್ರಯತ್ನ ಮಾಡಿದ್ದಾರೆ. ಪಾಲಿಕೆ ವೈದ್ಯಾಧಿಕಾರಿಗಳು, ಪಶು ವೈದ್ಯಕೀಯ ಕಾಲೇಜಿನ ಪ್ರಮುಖರು, ಪಶುವೈದ್ಯಕೀಯ ಇಲಾಖೆ ಎಲ್ಲವನ್ನೂ ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ.
ಕೆಲ ಪಶು ವೈದ್ಯರು ಇವತ್ತಿನ ಕೆಲಸದ ಅವಧಿ ಮುಗಿದಿದೆ. ನಾಳೆ ಭಾನುವಾರ ರಜೆ. ಸೋಮವಾರ ಕುದುರೆಯನ್ನು ಕರೆತನ್ನಿ ಎಂದು ನುಣುಚಿಕೊಂಡಿದ್ದಾರೆ. ಒಮ್ಮೆ ಕರೆ ಮಾಡಿದವರಿಗೆ ಮತ್ತೊಮ್ಮೆ ಫೋನ್ ಮಾಡಿದರೆ ಫೋನ್ ಸ್ವೀಕರಿಸದೆ ತಪ್ಪಿಸಿಕೊಂಡಿದ್ದಾರೆ. ಆಗ ಈ ನಾಲ್ವರಿಗೆ ನೆನಪಾಗಿದ್ದೇ ಶಿರಸಿಯ ಅಮೇಜಿಂಗ್ ಪೆಟ್ ಪ್ಲಾನೆಟ್.
ಪೂಜಾ ರಾಜ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರು ಕೂಡಲೇ ಸ್ಪಂದಿಸಿ ಕುದುರೆಯನ್ನು ಕರೆತರುವಂತೆ ತಿಳಿಸಿದ್ದಾರೆ. ಕುದುರೆಯ ತೊಡೆಯ ಭಾಗಕ್ಕೆ ಹೊಡೆತ ಬಿದ್ದು ಚರ್ಮ ಸುಲಿದು ಮಾಂಸಖಂಡ ಹೊರಬಂದಿತ್ತು. ಅದರ ಗರ್ಭಕೋಶಕ್ಕೂ ಹೊಡೆತ ಬಿದ್ದಿತ್ತು. ಈ ಸಂದರ್ಭದಲ್ಲಿ ಕುದುರೆ ಹಾಗೂ ಅದರ ಹೊಟ್ಟೆಯಲ್ಲಿದ್ದ ಮರಿಯನ್ನು ಉಳಿಸುವುದು ಪೂಜಾ ರಾಜ್ ತಂಡಕ್ಕೆ ಸವಾಲಾಗಿತ್ತು. ಸತತ ಐದು ದಿನಗಳ ಬಳಿಕ ಕುದುರೆ ಚೇತರಿಸಿಕೊಂಡು ಓಡಾಡುತ್ತಿದೆ. ಆಹಾರವನ್ನೂ ಸೇವಿಸುತ್ತಿದೆ. ಆದರೆ ಅದರ ಗರ್ಭಕೋಶಕ್ಕೆ ಆಗಿರುವ ಗಾಯ ಸಂಪೂರ್ಣ ವಾಸಿಯಾಗಿಲ್ಲ. ಚಿಕಿತ್ಸೆ ಮುಂದುವರಿದಿದೆ. ಅದಕ್ಕಾಗಿ ಕುದುರೆಗೆ ಆಂಟಿಬಯಾಟಿಕ್ ನೀಡಲಾಗುತ್ತಿದೆ. ಪ್ರತಿ ಮೂರ‌್ನಾಲ್ಕು ಗಂಟೆಗೊಮ್ಮೆ ಗಾಯವನ್ನು ಶುಭ್ರಗೊಳಿಸಿ ಔಷಧ ಹಚ್ಚಲಾಗುತ್ತಿದೆ.
ದೇಶದ ವಿವಿಧೆಡೆಯಿಂದ ಪ್ರಾಣಿಗಳು:ಪದ್ಮಾ ಸೇವಾ ಟ್ರಸ್ಟ್‌ನಡಿ ಆರು ವರ್ಷಗಳ ಹಿಂದೆ ಆರಂಭವಾದ ಸ್ವಯಂ ಸೇವಾ ಸಂಸ್ಥೆಯೇ ಅಮೇಜಿಂಗ್ ಪೆಟ್ ಪ್ಲಾನೆಟ್. ಉತ್ತರ ಕನ್ನಡ ಜಿಲ್ಲೆಯ ಮೊದಲ ಎನಿಮಲ್ ರೆಸ್ಕೂೃ ಸೆಂಟರ್. ವಿಶೇಷವೆಂದರೆ ಇಲ್ಲಿಗೆ ದೇಶದ ವಿವಿಧ ಭಾಗಗಳಿಂದ ಗಾಯಗೊಂಡ ಪ್ರಾಣಿ, ಪಕ್ಷಿಗಳನ್ನು ತರಲಾಗುತ್ತದೆ. ಇಲ್ಲಿ ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಇರಿಸಿಕೊಳ್ಳಲಾಗುತ್ತಿದೆ. ತೀರಾ ಇತ್ತೀಚೆಗೆ ಲಡಾಕ್‌ನಿಂದ ಕುರಿಗಳು, ರಾಜಸ್ತಾನದಿಂದ ಒಂಟೆಗಳು ಬಂದಿವೆ ಎಂದು ಪೂಜಾ ರಾಜ್ ‘ವಿಜಯವಾಣಿ’ಗೆ ತಿಳಿಸಿದರು. ಇಲ್ಲಿ ಗಾಯಗೊಂಡ ಕಾಗೆಗಳು, ಕಪ್ಪೆಗಳಿಗೂ ಚಿಕಿತ್ಸೆ ಇದೆ. ಆಶ್ರಯವೂ ದೊರೆಯುತ್ತಿದೆ. ಬೀದಿ ನಾಯಿಗಳು, ಬೆಕ್ಕುಗಳೂ ಇಲ್ಲಿವೆ.
ಜಿಲ್ಲಾ ಕೇಂದ್ರದಲ್ಲಿ ಸಿಗದ ಸೇವೆ:ಜಿಲ್ಲಾ ಕೇಂದ್ರವಾದ ಶಿವಮೊಗ್ಗದಲ್ಲಿ ಒಂದು ಕುದುರೆಗೆ ಚಿಕಿತ್ಸೆ ದೊರೆಯಲಿಲ್ಲ ಎಂಬುದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಪಶು ವೈದ್ಯಕೀಯ ಕಾಲೇಜು ಇದ್ದರೂ ಪ್ರಯೋಜನವಾಗಲಿಲ್ಲ. ಪಶು ಆಂಬುಲೆನ್ಸ್‌ಗೆ ಚಾಲಕರೇ ಇಲ್ಲ. ಹೀಗಿರುವಾಗ ಪ್ರಾಣಿ ರಕ್ಷಣೆ ಹೇಗೆ? ಪಾಲಿಕೆಯಿಂದ ಬಿಡಾಡಿ ಕುದುರೆಗಳನ್ನು ಹಿಡಿಯುವ ಕೆಲಸವಷ್ಟೇ ಸಾಧ್ಯ ಎಂದು ಪ್ರಾಣಿಪ್ರಿಯರೊಬ್ಬರ ವ್ಯವಸ್ಥೆಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net