ಜಿಲ್ಲೆಯಲ್ಲಿನ ಸರ್ಕಾರಿ ರೇಷ್ಮೆ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಿ

ark image
Published on

ಕೊಳ್ಳೇಗಾಲ: ರಾಜ್ಯದಲ್ಲಿ ರೇಷ್ಮೆ ಇಲಾಖೆಗೆ ಸೇರಿದ ಕಟ್ಟಡಗಳು ಹಾಗೂ ಖಾಲಿ ಜಾಗಗಳನ್ನು ಯಾವ್ಯಾವ ಇಲಾಖೆಗಳ ವಶಕ್ಕೆ ನೀಡಲಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನಿಸಿದರು.

ರೇಷ್ಮೆ ಫಿಲೇಚರ್‌ಗಳನ್ನು ಉತ್ತೇಜನ ಪಡಿಸಲು ಹಾಗೂ ಪುನರಾರಂಭಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂದು ಕೇಳಿದರು. ಇದಕ್ಕೆ ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಪ್ರತಿಕ್ರಿಯಿಸಿ, ರಾಜ್ಯದಲ್ಲಿನ ರೇಷ್ಮೆ ಇಲಾಖೆಗೆ ಸೇರಿದ ಕಟ್ಟಡಗಳು, ಇತರ 10 ಇಲಾಖೆಗಳಿಗೆ ಹಾಗೂ ಖಾಲಿ ಜಾಗವನ್ನು ಇತರ 24 ಇಲಾಖೆಗಳಿಗೆ ನೀಡಲಾಗಿದೆ. ಇಲಾಖೆಯ ಫಲಾನುಭವಿ ಆಧಾರಿತ ಕಾರ್ಯಕ್ರಮಗಳಡಿ ರೇಷ್ಮೆ ನೂಲು ಬಿಚ್ಚಾಣಿಕೆ ಚಟುವಟಿಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರೋತ್ಸಾಹಿಸುತ್ತಿರುವುದರಿಂದ ಸರ್ಕಾರದ ವತಿಯಿಂದ ಸರ್ಕಾರಿ ರೇಷ್ಮೆ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುವ ಪ್ರಸ್ತಾಪ ಇರುವುದಿಲ್ಲ ಎಂದು ಹೇಳಿದರು.

ಬಳಿಕ ಶಾಸಕರು ಮಾತನಾಡಿ, ರೇಷ್ಮೆ ಕೃಷಿ ಕ್ಷೇತ್ರದ ಸಾಕಣೆಗಳನ್ನು ಚಾಕಿ ಪುನರಾರಂಭಿಸಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ರಮಗಳಿಂದ ಸರ್ಕಾರ ಯಾವ ಫಲಿತಾಂಶಗಳನ್ನು ಪಡೆದಿದೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಸುಮಾರು 254 ನೋಂದಾಯಿತ ಚಾಕಿ ಸಾಕಣೆ ಕೇಂದ್ರಗಳು ಕೆಲಸ ಮಾಡುತ್ತಿದ್ದು, ಇಲ್ಲಿ ನಿರಂತರವಾಗಿ ಮೊಟ್ಟೆಗಳನ್ನು ಚಾಕಿ ಮಾಡಿ ರೈತರಿಗೆ ವಿತರಿಸಲಾಗುತ್ತಿದೆ. ರೇಷ್ಮೆ ಬೆಳೆಗಾರರಿಗೆ ಚಾಕಿ ಶುಲ್ಕದ ಆರ್ಥಿಕ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಅಲ್ಪಪ್ರಮಾಣದಲ್ಲಿ ಕೆಲವು ಆಯ್ಕೆ ಮಾಡಿರುವ ಕೃಷಿ ಕ್ಷೇತ್ರಗಳಿಂದ ದ್ವಿತಳಿ ಚಾಕಿ ಮಾಡಿ ರೈತರಿಗೆ ವಿತರಿಸುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ದ್ವಿತಳಿ ಚಾಕಿ ಮಾಡಿ ರೈತರಿಗೆ ವಿತರಿಸಲು ಯೋಚಿಸಿದ್ದು, ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಕ್ರಮವಹಿಸಲಾಗುತ್ತಿದೆ. ಸಾಕಣೆ ಕೇಂದ್ರಗಳ ಮುಖಾಂತರ ಸರಬರಾಜಾಗಿರುವ ಚಾಕಿ ಹುಳುಗಳು ಉತ್ತಮವಾಗಿ ಆರೋಗ್ಯಕರವಾಗಿದ್ದು, ಉತ್ತಮ ಗುಣಮಟ್ಟದ ಗೂಡು ಉತ್ಪಾದಿಸಲು ಹಾಗೂ ರೈತರಿಗೆ ಆರ್ಥಿಕ ಲಾಭ ಪಡೆಯಲು ಅವಕಾಶವಾಗಲಿದೆ ಎಂದು ಸಚಿವರು ಹೇಳಿದರು.

ನಂತರ ಶಾಸಕರು ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ರೇಷ್ಮೆ ನೂಲು ಬಿಚ್ಚುವ ಹಾಗೂ ಸರ್ಕಾರಿ ರೇಷ್ಮೆ ಕಾರ್ಖಾನೆಗಳನ್ನು ಮತ್ತು ರೇಷ್ಮೆ ನೂಲು ಬಿಚ್ಚಾಣಿಕೆ ತರಬೇತಿ ಹಾಗೂ ಉತ್ಪಾದನಾ ಕೇಂದ್ರಗಳಾಗಿ ಪುನಶ್ಚೇತನಗೊಳಿಸಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ಚಾಮರಾಜನಗರ ಜಿಲ್ಲೆಯಲ್ಲಿನ ಸರ್ಕಾರಿ ರೇಷ್ಮೆ ನೂಲು ಬಿಚ್ಚಾಣಿಕೆ ಕಾರ್ಖಾನೆಗಳ ಜಾಗದಲ್ಲಿರುವ ಹಾಲಿ ಸೌಕರ್ಯಗಳನ್ನು ಬಳಸಿಕೊಂಡು ಆ ಭಾಗದ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಬಲೀಕರಣದ ಕುರಿತು ಪ್ರಸ್ತಾವನೆ ತಯಾರಿಸಿದ್ದು ಪರಿಶೀಲಿಸಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net