ಕೂಳಗೆರೆ ಏತನೀರಾವರಿ ಯೋಜನೆಯ ಪುನಶ್ಚೇತನ ಕಾಮಗಾರಿಗೆ ಚಾಲನೆ

5KMD-2
ಕೂಳಗೆರೆ ಏತನೀರಾವರಿ ಯೋಜನೆಯ ಪುನಶ್ಚೇತನ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಭೂಮಿಪೂಜೆ ನೆರೆವೇರಿಸಿದರು.
Published on

ಕೆ.ಎಂ.ದೊಡ್ಡಿ: ಕೂಳಗೆರೆ ಏತನೀರಾವರಿ ಯೋಜನೆಯ ಪುನಶ್ಚೇತನ ಕಾಮಗಾರಿಗೆ 2.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಕೃಷಿಗೆ ಅನುಕೂಲವಾಗುವಂತೆ ಶೀಘ್ರ ನೀರಿನ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.

ಸಮೀಪದ ಕೂಳಗೆರೆ ಏತನೀರಾವರಿ ಯೋಜನೆ ಪುನಶ್ಚೇತನ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 4 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಸರ್ಕಾರದಿಂದ ಹಣ ಬಿಡುಗಡೆಗೊಳಿಸಲಾಗಿದೆ ಎಂದರು.

ಏತನೀರಾವರಿ ಪ್ರಾರಂಭಿಸಿದರೆ ಕೂಳಗೆರೆ, ಅಣ್ಣಳ್ಳಿದೊಡ್ಡಿ, ಕೊತ್ತಿಪುರ ಎಡದಂಡ ಮತ್ತು ಬಲದಂಡೆಯ ಸಾವಿರಾರು ಜಮೀನುಗಳಿಗೆ ನೀರುಣಿಸಲು ಸಾಧ್ಯ ಎಂದರು.

ಕೂಳಗೆರೆ ವ್ಯಾಪ್ತಿಯ ಗ್ರಾಮಗಳು ಮಳೆಯಾಶ್ರಿತ ಪ್ರದೇಶವಾಗಿದ್ದು, ಹಿಂದಿನಿಂದಲೂ ನೀರಾವರಿಯಿಂದ ವಂಚಿತವಾಗಿವೆ. ಈ ನಡುವೆ ಅಂತರ್ಜಲ ಮಟ್ಟವು ಕುಸಿದ ಪರಿಣಾಮ ಜನ-ಜಾನುವಾರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಏತನೀರಾವರಿ ಆರಂಭಗೊಂಡರೆ ಅಂತರ್ಜಲ ಹೆಚ್ಚುವುದರ ಜತೆೆಗೆ ಎಲ್ಲ ಕೊಳವೆ ಬಾವಿಗಳಲ್ಲಿಯೂ ಸಮೃದ್ಧಿಯಾಗಿ ನೀರು ಬರಲಿದೆ ಎಂದರು.

ಮದ್ದೂರು ಕೆರೆ, ಸೂಳೆಕೆರೆಯಿಂದ ಬರುವ ಹೆಚ್ಚುವರಿ ನೀರು ಶಿಂಷಾ ನದಿ ಸೇರುತ್ತಿದೆ. ಸೂಳೆಕೆರೆಯಿಂದ ಬರುವ ಹೆಚ್ಚುವರಿ ನೀರು ಹೆಬ್ಬಾಳದ ಮೂಲಕ ಹರಿದು ಬಂದು ಬನ್ನಹಳ್ಳಿ, ಕೂಳಗೆರೆ ಮುಖಾಂತರ ಶಿಂಷಾ ನದಿ ಸೇರುತ್ತದೆ. ಇದರಿಂದ ಬನ್ನಹಳ್ಳಿ ಮತ್ತು ಕೂಳಗೆರೆ ಗ್ರಾಮಗಳ ಮಧ್ಯಭಾಗದ ನದಿ ತೀರದಲ್ಲಿ ನೀರೆತ್ತುವ ಯೋಜನೆ ರೂಪುಗೊಂಡಿದೆ ಎಂದು ಹೇಳಿದರು.

ಕೂಳಗೆರೆ ಏತನೀರಾವರಿ ಯೋಜನೆಯಿಂದ 17 ಕೆರೆಗಳಿಗೆ ನೀರಿನ ಆಸರೆ ದೊರಕಲಿದೆ. ಈ ಯೋಜನೆ ಏಪ್ರಿಲ್ ಅಥವಾ ಮೇ ಒಳಗಾಗಿ ಪೂರ್ಣಗೊಳ್ಳುವ ಸಾಧ್ಯತೆಗಳಿವೆ ಎಂದರು.

ಗ್ರಾ.ಪಂ. ಸದಸ್ಯರಾದ ಜಯರಾಮು, ತಿಪ್ಪೂರು ಕೃಷ್ಣ, ಯೋಗೇಶ, ತಿಮ್ಮೇಗೌಡ, ಗುಂಡ, ಪಾಪಣ್ಣ, ಸಿದ್ದೇಗೌಡ, ಮಲ್ಲೇಗೌಡ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net