ಪಶು ಭಾಗ್ಯ ಯೋಜನೆ ಮರುಜಾರಿ

k.ventakesh
Published on

ಮೈಸೂರು: ಸ್ಥಗಿತಗೊಂಡಿರುವ ಪಶು ಭಾಗ್ಯ ಯೋಜನೆ ಮುಂದಿನ ವರ್ಷದಿಂದ ಮರು ಜಾರಿಗೆ ಬರಲಿದೆ ಎಂದು ಪಶುಸಂಗೋಪನೆ, ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದರು.


ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಮೈಸೂರು ತಾಲೂಕಿನ ಉತ್ತನಹಳ್ಳಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಪಶು ಸಖಿಯರಿಗೆ ರಾಜ್ಯ ಮಟ್ಟ ತರಬೇತಿ, 4ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿದರು.


2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಜಾರಿ ಮಾಡಿದ್ದ ಪಶುಭಾಗ್ಯ ಯೋಜನೆಗೆ ಬಹಳ ಬೇಡಿಕೆ ಇದೆ. ಅದೀಗ ಸ್ಥಗಿತಗೊಂಡಿದೆ. ಅದಕ್ಕೆ ಮರುಚಾಲನೆ ನೀಡಬೇಕೆಂದು ಶಾಸಕರು, ರೈತರು ಆಗ್ರಹಿಸುತ್ತಿದ್ದಾರೆ. ಈ ಯೋಜನೆಯಿಂದ ಜಾನುವಾರು ಖರೀದಿಗೆ ರೈತರಿಗೆ ಅನುಕೂಲವಾಗಲಿದೆ. ಹಾಲು ಉತ್ಪಾದನೆಯೂ ಹೆಚ್ಚಾಗಲಿದೆ. ಅದಕ್ಕಾಗಿ ಈ ಯೋಜನೆಯನ್ನು ಮತ್ತೆ ಶುರು ಮಾಡುವ ನಿಟ್ಟಿನಲ್ಲಿ ಸಿಎಂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.


ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಈ ಸಬ್ಸಿಡಿಯನ್ನು ಹೆಚ್ಚಳ ಮಾಡಲಾಗುವುದು. ಆದರೆ, ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ತೊಂದರೆಯಾಗಿದ್ದು, ಈ ನಿಟ್ಟಿನಲ್ಲಿ ಮುಂದಿನ ವರ್ಷ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಹುದ್ದೆ ಮಂಜೂರು

ಪಶು ಸಂಗೋಪನಾ ಇಲಾಖೆಗೆ 18 ಸಾವಿರ ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 9 ಸಾವಿರ ಹುದ್ದೆ ಭರ್ತಿಯಾಗಿವೆ. ಇನ್ನೂ ಅರ್ಧದಷ್ಟು ಹುದ್ದೆಗಳು ಖಾಲಿ ಇವೆ. ಹಾಗಾಗಿ ಕಾರ್ಯನಿರ್ವಹಣೆಗೆ ತೊಂದರೆಯಾಗಿದೆ. 250 ಕಿರು ಪಶುವೈದ್ಯಕೀಯ ಪರೀಕ್ಷಕರ ನೇಮಕವಾಗಿದೆ. ಇನ್ನು 4 ತಿಂಗಳಲ್ಲಿ 400 ಪಶುವೈದ್ಯರು ನಿಯೋಜನೆಗೊಳ್ಳಲಿದ್ದಾರೆ. ಉಳಿದ ಹುದ್ದೆಗಳ ನೇಮಕಾತಿ, ಇಲಾಖೆಯಲ್ಲಿರುವ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂ ಎದುರೇ ಕೋರಿಕೆ ಸಲ್ಲಿಸಿದರು.

ರಾಜ್ಯದಲ್ಲಿರುವ 5,942 ಗ್ರಾಮ ಪಂಚಾಯಿತಿಗಳಿಗೆ ತಲಾ ಒಬ್ಬರಂತೆ ಪಶು ಸಖಿ ನೇಮಕ ಮಾಡಲಾಗಿದೆ. 8 ರಿಂದ 10ನೇ ತರಗತಿ ವಿದ್ಯಾರ್ಹತೆ ಹೊಂದಿರುವ ಈ ಹುದ್ದೆಗೆ ನಿಯೋಜನೆಗೊಂಡಿರುವ ಪೈಕಿ 1,800 ಜನರಿಗೆ ತರಬೇತಿ ನೀಡಲಾಗುತ್ತಿದೆ. ಇವರ ಸಹಾಯದಿಂದ ರಾಸುಗಳ ಸಮಸ್ಯೆಯನ್ನು ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದರು.

ಕೇರಳದಲ್ಲಿ ರಾಸುಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ರಾಸುಗಳಿಗೆ 4ನೇ ಸುತ್ತಿನ ಲಸಿಕೆ ನೀಡಲಾಗುತ್ತಿದೆ. ಈ ವಿಷಯದಲ್ಲಿ ದೇಶದಲ್ಲೇ ರಾಜ್ಯ ಮೊದಲ ಸ್ಥಾನದಲ್ಲಿ ಇದೆ. ಬೇರೆ ರಾಜ್ಯಗಳಲ್ಲಿ ಇನ್ನೂ 1-2 ಲಸಿಕೆಯನ್ನೇ ನೀಡಿಲ್ಲ ಎಂದರು.


250 ಕಿರು ಪಶುವೈದ್ಯಕೀಯ ಪರೀಕ್ಷಕರ ಹುದ್ದೆಗೆ ನಿಯೋಜನೆಗೊಂಡವರ ಪೈಕಿ 3 ಜನರಿಗೆ ನೇಮಕಾತಿ ಪತ್ರವನ್ನು ಸಿಎಂ ವಿತರಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net