

ಚಿಕ್ಕಮಗಳೂರು: 500 ವರ್ಷಗಳ ನಂತರ ಮತ್ತೆ ಅಯೋಧ್ಯೆಯಲ್ಲಿ ಸಂಭ್ರಮ ನೆಲೆಸಿ ಜಗತ್ತಿನ ಜನ ಸಂಭ್ರಮಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಶ್ರೀರಾಮನ ಪಟ್ಟಾಭಿಷೇಕ ಮಹೋತ್ಸವದ ಕಾಲಘಟ್ಟದಲ್ಲಿ ವರ್ಣನೆಯನ್ನು ಮಾತ್ರ ಕೇಳಿದ್ದೆವು. ಆ ವರ್ಣನೆ ಮತ್ತೆ ಸಾಕಾರಗೊಳ್ಳುವ ಕೆಲಸ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಅಲ್ಲಿನ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಇದೊಂದು ಶುಭ ಸಂಕೇತ, ಇದನ್ನೆ ಪುನರುತ್ಥಾನ ಎನ್ನುವುದು ಎಂದರು.
ಜಗತ್ತಿನ ಬೇರೆಲ್ಲೂ ಇಲ್ಲ
ನಾವ್ಯಾರಿಗೂ ಕೆಡುಕು ಮಾಡಿದವರಲ್ಲ. ಎಲ್ಲವನ್ನು ಸ್ವೀಕಾರ ಮಾಡಿದವರು. ಅಣುರೇಣು ತೃಣಕಾಷ್ಠಗಳಲ್ಲಿ ಭಗವಂತ ಇದ್ದಾನೆ ಎಂಬ ಸಂದೇಶವನ್ನಾಗಲಿ, ಎಲ್ಲೆಡೆಯಿಂದಲೂ ಒಳ್ಳೆ ಗುಣ ಹರಿದು ಬರಲಿ ಎಂಬ ಪ್ರಾರ್ಥನೆಯಾಗಲಿ, ದೇವನೊಬ್ಬ ನಾಮ ಹಲವು ಎನ್ನುವ ನಂಬಿಕೆಯಾಗಲಿ ಈ ನೆಲದ ಹೊರತಾಗಿ ಜಗತ್ತಿನ ಬೇರೆಲ್ಲೂ ಇಲ್ಲ. ಆದರೂ ದುರುದ್ದೇಶಪೂರ್ವಕವಾಗಿ ಸಾವಿರಾರು ವರ್ಷಗಳಿಂದ ಯಾರ್ಯಾರು ಎಷ್ಟೆಷ್ಟು ನಮ್ಮ ಸಂಸ್ಕøತಿಯನ್ನು ನಾಶ ಮಾಡಲು ಪ್ರಯತ್ನಪಟ್ಟು ಆ ಒಂದು ಕಾರಣದಿಂದ ಅಯೋಧ್ಯೆ ವೈಭವ ಕಸಿಯುವ ಕೆಲಸ ಮಾಡಿದ್ದರು. ಪುನಃ ಆ ಗತವೈಭವ ಮರುಕಳಿಸಿದೆ ಎಂದರು.
ಶಕ್ತಿ ತುಂಬುವ ಕೆಲಸ
ಪಕ್ಷ ಯಾವುದೆ ಜವಾಬ್ದಾರಿ ನೀಡಿದರೂ ಅದಕ್ಕೆ ಶಕ್ತಿ ತುಂಬುವ ಕೆಲಸವಷ್ಟೆ ನನ್ನದು. ಮಹಾರಾಷ್ಟ್ರ, ಗೋವಾ, ತಮಿಳುನಾಡಿನ ಸಂಘಟನೆ ಉಸ್ತುವಾರಿ ವಹಿಸಿದೆ. ಬೇರೆಲ್ಲ ಪದಾಧಿಕಾರಿಗಳಿಗೆ 1 ರಿಂದ 4 ರಾಜ್ಯಗಳ ಜವಾಬ್ದಾರಿ ಕೊಟ್ಟಿದ್ದಾರೆ. ಇದರ ಜತೆ ರಾಷ್ಟ್ರೀಯ ಅಧ್ಯಕ್ಷರ ಪ್ರವಾಸದ ಹೊಣೆಗಾರಿಕೆ ನೀಡಿದ್ದಾರೆ. ಚಿಕ್ಕಮಗಳೂರು ಹಾಗೂ ಕರ್ನಾಟಕದಲ್ಲಿ ಸಂಘಟನೆ ಕಟ್ಟಲು ಯಾವ ಮಾನದಂಡಗಳನ್ನು ಪ್ರಯೋಗಿಸಿದ್ದೆವೋ ಅದನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಕಾರ್ಯಕರ್ತರು ಜನನಾಯಕರಾಗಿ ಹೊರ ಬಂದು ನೇತೃತ್ವ ವಹಿಸುವಂತೆ ಮಾಡಬೇಕಾದ ಎಲ್ಲ ರೀತಿಯ ಶಕ್ತಿ ತುಂಬುವ ಕೆಲಸ ಮಾಡುವ ವಿಶ್ವಾಸವಿದೆ ಎಂದರು.