

ನರಗುಂದ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಂತೆ ಪ್ರಕೃತಿ ರಕ್ಷಣೆ, ಕೆರೆ ಅಭಿವೃದ್ಧಿ, ಮುಂದಿನ ಪೀಳಿಗೆಗೆ ಅವಶ್ಯಕವಿರುವ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಪುಣ್ಯಾರಣ್ಯ ಪತ್ರಿವನಮಠದ ಡಾ. ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಹೇಳಿದರು.
ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಭಿವೃದ್ಧಿಪಡಿಸಿರುವ ಕೆರೆ ಹಸ್ತಾಂತರ, ಬಾಗಿನ ಅರ್ಪಣೆ, ಸಸಿನೆಡುವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಧಗ್ರಾ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗಿಶ ಬಿ. ಮಾತನಾಡಿ, ಸಿದ್ದಾಪುರ ಗ್ರಾಮಸ್ಥರ ಸಹಕಾರದಿಂದ ಇಲ್ಲಿನ ಕೆರೆ ಹೂಳೆತ್ತುವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಕೆರೆಯನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಎಂದರು.
ಕೆರೆ ಸಮಿತಿ ಅಧ್ಯಕ್ಷ ಬಸನಗೌಡ ದೊಡ್ಡಗೌಡ್ರ ಮಾತನಾಡಿ, ಐತಿಹಾಸಿಕ ಸಿದ್ದಾಪುರದ ಕುಡಿಯುವ ನೀರಿನ ಕೆರೆಯ ಹೂಳೆತ್ತುವಂತೆ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ, ಕೆರೆ ಹೂಳೆತ್ತುವ ಕಾರ್ಯ ನಡೆದಿರಲಿಲ್ಲ. ಧರ್ಮಸ್ಥಳ ಸಂಸ್ಥೆಯಿಂದ ಇಲ್ಲಿನ ಕೆರೆ ಪುನಶ್ಚೇತನಗೊಳಿಸಿದ್ದರಿಂದ ಈ ಭಾಗದ ರೈತರ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಪ್ರಾಣಿ, ಪಕ್ಷಿಗಳಿಗೆ ತುಂಬಾ ಸಹಕಾರಿಯಾಗಿದೆ ಎಂದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಎಚ್.ಬಿ. ಅಸೂಟಿ, ಸುರೇಶಯ್ಯ ಹಿರೇಮಠ, ಕಣಕೀಕೊಪ್ಪ ಗ್ರಾಪಂ ಉಪಾಧ್ಯಕ್ಷೆ ಸುಂದರವ್ವ ಅಖಂಡಪ್ಪ ಬಡಿಗೇರ, ಪಿಡಿಒ ಕೆ.ಎಸ್. ಹಾದಿಮನಿ, ವಿನಯಕುಮಾರ ಪಾಟೀಲ, ನಿರ್ಮಲ ಕುರುಬರ,ಜಗದೀಶ ಬಿ, ರಾಜೇಸಾಬ ತಹಸೀಲ್ದಾರ್, ಗುಡ್ಡಾಚಾರಿ ಬಡಿಗೇರ, ಪೂರ್ಣಿಮಾ, ಜಯಶ್ರೀ, ಭಾರತಿ, ಸಬೀನಾ, ಶೋಭಾ ಇತರರಿದ್ದರು.