ಪಾಳು ಮತ್ಸಾೃಗಾರಕ್ಕೆ ಪುನರುಜ್ಜೀವನ

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಪಾಳುಬಿದ್ದಿರುವ ಬೃಹತ್ ಮತ್ಸಾೃಗಾರ(ಅಕ್ವೇರಿಯಂ)ಗೆ ಪುನರುಜ್ಜೀವನ ನೀಡಲು ಶ್ರೀ ಚಾಮರಾಜೇಂದ್ರ ಮೃಗಾಲಯದ ಮುಂದಾಗಿದೆ. ಅರೆಬರೆಯಾಗಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಮತ್ತೊಂದು ಪ್ರವಾಸಿ ತಾಣವಾಗಿ ರೂಪಿಸಲು ಯೋಜನೆ ರೂಪಿಸಿದೆ.

ನನೆಗುದಿಗೆ ಬಿದ್ದಿರುವ ಮತ್ಸಾೃಗಾರಕ್ಕೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ(ಪಿಪಿಪಿ) ಯೋಜನೆಯಡಿ ಹೊಸ ರೂಪ ನೀಡಲು ಕ್ರಮ ತೆಗೆದುಕೊಂಡಿದ್ದು, ವಿಸ್ತೃತ ವರದಿ(ಡಿಪಿಆರ್) ತಯಾರು ಮಾಡಲು ಏಜೆನ್ಸಿ ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿದೆ.


ದೇಶದ ಪ್ರತಿಷ್ಠಿತ ಚಾಮರಾಜೇಂದ್ರ ಮೃಗಾಲಯ ಅನೇಕ ವೈವಿಧ್ಯಮಯ ಪ್ರಾಣಿ-ಪಕ್ಷಿ ಸಂಕುಲದ ತಾಣ. ಸಹಸ್ರಾರು ಪ್ರವಾಸಿಗರನ್ನು ಇದು ಚುಂಬಕ ಶಕ್ತಿಯಂತೆ ಆಕರ್ಷಿಸುತ್ತಿದೆ. ಇಲ್ಲಿಗೆ ಬರುವ ವೀಕ್ಷಕರನ್ನು ಸೆಳೆಯಲು ಮತ್ಸಾೃಗಾರವನ್ನು ನಿರ್ಮಾಣಕ್ಕೆ ನಿರ್ಣಯಿಸಲಾಗಿತ್ತು.


ಈ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ 2010-11ನೇ ಸಾಲಿನಲ್ಲಿ ಮೃಗಾಲಯ ಹಾಗೂ ಕಾರಂಜಿಕೆರೆ ನಡುವೆ ಬೃಹತ್ ಮತ್ಸ್ಯಾಗಾರ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. 4.26 ಕೋಟಿ ರೂ. ವೆಚ್ಚದಲ್ಲಿ 6 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಅಕ್ವೇರಿಯಂ ಕಟ್ಟಡದ ಕೆಲಸ ಎರಡು ವರ್ಷದಲ್ಲೇ ಪೂರ್ಣಗೊಂಡಿತು. ಬಳಿಕ ಅನುದಾನದ ಕೊರತೆ ನೆಪದಲ್ಲಿ ಉಳಿದ ಕೆಲಸ ಸ್ಥಗಿತಗೊಂಡಿತು. ಕಟ್ಟಡ ಹೊರತುಪಡಿಸಿ ಅಲ್ಲಿ ಬೇರೆ ಏನು ಆಗಿಲ್ಲ. ಸದ್ಯಕ್ಕೆ ಅಕ್ವೇರಿಯಂ ಅಪೂರ್ಣವಾಗಿ ನಿಂತಿದ್ದು, ನಿರುಪಯುಕ್ತವಾಗುವ ಮೂಲಕ ಹಾಳು ಕೊಂಪೆಯಾಗಿದೆ.


ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ 2018ರ ಜುಲೈ 14ರಂದು ಅಕ್ವೇರಿಯಂ ಕಟ್ಟಡವನ್ನು ಮೃಗಾಲಯಕ್ಕೆ ಹಸ್ತಾಂತರಿಸಲಾಯಿತು. ಕಾಮಗಾರಿ ಪೂರ್ಣಗೊಳಿಸಲು 4.26 ಕೋಟಿ ರೂ. ಬೇಕಿತ್ತು. ಇಷ್ಟು ಹಣ ಹೊಂದಿಸಲು ಮೃಗಾಲಯಕ್ಕೆ ಕಷ್ಟಕರವಾಯಿತು. ಇದರಿಂದ ಇಡೀ ಕಾಮಗಾರಿ ನನೆಗುದಿಗೆ ಬಿದ್ದಿದೆ.


ಇದೀಗ ಈ ಕಾಮಗಾರಿ ಪೂರ್ಣಗೊಳಿಸಲು ಮೃಗಾಲಯ ತೀರ್ಮಾನಿಸಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಅಕ್ವೇರಿಯಂ ಪೂರ್ಣಗೊಳಿಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರ ಸಹ ಅನುಮೋದನೆ ನೀಡಿದೆ. ಈ ಕಟ್ಟಡವನ್ನು ಸದ್ಬಳಕೆ ಮಾಡಿಕೊಳ್ಳುವ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ.


ಈ ಕಟ್ಟಡ ನಿರ್ಮಾಣವಾಗಿ ದಶಕವೇ ಗತಿಸಿದೆ. ಈ ಹಿನ್ನೆಲೆಯಲ್ಲಿ ಕಟ್ಟಡದ ಸತ್ವ, ಭದ್ರತೆ ಸೇರಿದಂತೆ ಇನ್ನಿತರ ಆಯಾಮಗಳಲ್ಲಿ ಪರಿಶೀಲಿಸಲು ಸಂಸ್ಥೆಯನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ. ಆಯ್ಕೆಯಾದ ಏಜೆನ್ಸಿಯ ತಾಂತ್ರಿಕ ಪರಿಣಿತರ ತಂಡ ಈ ಕಟ್ಟಡವನ್ನು ತಾಂತ್ರಿಕ ಹಾಗೂ ಹಣಕಾಸು ದೃಷ್ಟಿಕೋನದಲ್ಲಿ ಪರಿಶೀಲನೆ ನಡೆಸಲಿದೆ. ಈ ಸಂಸ್ಥೆಯು ಸಲಹೆಗಾರ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ನಿಸ್ಪ್ರಯೋಜಕವಾಗಿರುವ ಕಟ್ಟಡ ಹಾಗೂ ಅಲ್ಲಿರುವ ಖಾಲಿ ಜಾಗ ಬಳಸಿಕೊಂಡು ಅಕ್ವೇರಿಯಂ ನಿರ್ಮಿಸಬಹುದೇ? ಹಾಲಿ ಇರುವ ಕಟ್ಟಡ ಸುಭದ್ರವಾಗಿದೆಯೇ… ಹೀಗೆ ವಿವಿಧ ಆಯಾಮಗಳಲ್ಲಿ ಪರಿಶೀಲನೆ ಮಾಡಲಿದೆ.


ಕಾಮಗಾರಿ ಪೂರ್ಣಗೊಳಿಸಲು ಎಷ್ಟು ಹಣ ಬೇಕಾಗುತ್ತದೆ. ಹೂಡಿಕೆ ಮಾಡಿದ ಹಣ ಹಿಂಪಡೆಯಲು ಅನುಸರಿಸಬೇಕಾದ ಕ್ರಮ, ಅಕ್ವೇರಿಯಂ ವೀಕ್ಷಣೆಗೆ ಪ್ರವಾಸಿಗರ ಬರುವಿಕೆ, ವಾಣಿಜ್ಯ ದೃಷ್ಟಿಕೋನದಲ್ಲಿ ಅಕ್ವೇರಿಯಂ ಬಳಕೆ ಮಾಡಬಹುದೆ ಎಂಬ ಲೆಕ್ಕಾಚಾರವನ್ನು ಈ ಸಂಸ್ಥೆಯೇ ಅಧ್ಯಯನ ಮಾಡಲಿದೆ. ಆ ಬಳಿಕವೇ ಡಿಪಿಆರ್ ತಯಾರು ಮಾಡಲಾಗುತ್ತದೆ. ತ್ರಿಡಿ ಚಿತ್ರಗಳೊಂದಿಗೆ ಮತ್ಸಾೃಗಾರ ಯಾವ ಮಾದರಿಯೊಂದಿಗೆ ಇರಲಿದೆ ಎಂಬ ವರದಿಯನ್ನು ಮೃಗಾಲಯಕ್ಕೆ ನೀಡಲಿದೆ.


ಬಳಿಕವೇ ಡಿಪಿಆರ್ ಸಿದ್ಧಪಡಿಸಿ ಪಿಪಿಪಿ ಮಾದರಿಯಲ್ಲಿ ಅಕ್ವೇರಿಯಂ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗುತ್ತದೆ. ಅಕ್ವೇರಿಯಂ ನಿರ್ಮಿಸಿ, ಬಿಲ್ಡ್ ಆಪರೇಟ್ ಟ್ರಾನ್ಸ್‌ಫರ್ ಮೋಡ್ ವಿಧಾನದಲ್ಲಿ ಮೃಗಾಲಯಕ್ಕೆ ಒಪ್ಪಿಸಲಾಗುತ್ತದೆ. ಒಡಂಬಡಿಕೆ ಅನುಗುಣವಾಗಿ ಹಣ ಹೂಡಿಕೆ ಮಾಡಿದ ಸಂಸ್ಥೆಗೆ ಎಷ್ಟು ವರ್ಷಗಳ ಕಾಲ ಪ್ರವೇಶ ಶುಲ್ಕ ಸಂಗ್ರಹದ ಜವಾಬ್ದಾರಿ ನೀಡಬೇಕು, ನಿರ್ವಹಣೆ ಹೇಗೆ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ.

ತ್ವರಿತಗತಿಯಲ್ಲಿ ಅಕ್ವೇರಿಯಂ ನಿರ್ಮಿಸಿ, ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಬೇಕೆಂಬುದು ಮೃಗಾಲಯದ ಆಶಯವಾಗಿದೆ. ಈ ಕಾಮಗಾರಿ ಮೃಗಾಲಯಕ್ಕೆ ಆರ್ಥಿಕ ಹೊರೆಯಾಗಲ್ಲ. ಸಂಸ್ಥೆ ಆಯ್ಕೆಗೆ ಮಾತ್ರ ಮೃಗಾಲಯದ ವತಿಯಿಂದ ಶುಲ್ಕ ನೀಡಬೇಕಾಗಿದ್ದು, ಈ ಹಣವನ್ನು ಕೇಂದ್ರ ಸರ್ಕಾರವು ಹಂತ ಹಂತವಾಗಿ ಹಿಂದಿರುಗಿಸಲಿದೆ. ಅಕ್ವೇರಿಯಂ ಕಟ್ಟಡಕ್ಕೆ ಬೇಕಾಗುವ ಮೊತ್ತವನ್ನು ಟೆಂಡರ್ ಪಡೆದ ಖಾಸಗಿ ಸಂಸ್ಥೆ ವಿನಿಯೋಗಿಸಲಿದೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ.

ಇದು ಸಹ ಹಳ್ಳ ಹಿಡಿಯದಿರಲಿ:

ಮತ್ಸಾೃಗಾರ ಕೆಲಸವನ್ನು ಪೂರ್ಣಗೊಳಿಸಲು ಈ ಹಿಂದೆ ನ್ಯೂಜಿಲೆಂಡ್ ಮೂಲದ ಕಂಪನಿಯೊಂದು ಮುಂದೆ ಬಂದಿತ್ತು. ಗುಜರಾತ್ ಅಹಮದಾಬಾದ್‌ನಲ್ಲಿ 257 ಕೋಟಿ ರೂ. ವೆಚ್ಚದಲ್ಲಿ ಮತ್ಸಾೃಗಾರ ವಿಜ್ಞಾನ ಉದ್ಯಾನವನ್ನು ನಿರ್ಮಿಸಿರುವ ಈ ಸಂಸ್ಥೆಯು ಈ ಮತ್ಸಾೃಗಾರವನ್ನು ನಿರ್ಮಿಸಿಕೊಡಲು ಆಸಕ್ತ ತೋರಿಸಿತ್ತು. ಈ ಸಂಸ್ಥೆ ನೀಡಿದ ವರದಿ ಆಧಾರದ ಮೇಲೆ ಮೃಗಾಲಯವು 2020ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಹಸಿರು ನಿಶಾನೆ ದೊರೆಯಲಿಲ್ಲ. ಆದರೀಗ ಈ ಪ್ರಯತ್ನ ಸಹ ಹೀಗೆ ಹಳ್ಳ ಹಿಡಿಯಬಾರದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ

ಮತ್ಸಾೃಗಾರ ಕಾಮಗಾರಿ ಪೂರ್ಣಗೊಳಿಸಲು ಪಿಪಿಪಿ ಮಾದರಿ ಅನುಸರಿಸಲು ಒಪ್ಪಿಗೆ ದೊರೆತಿದೆ. ಕಟ್ಟಡವನ್ನು ತಾಂತ್ರಿಕವಾಗಿ ಪರಿಶೀಲಿಸಲು ಸಂಸ್ಥೆಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅದು ಡಿಪಿಆರ್ ತಯಾರಿಸಿ ನೀಡಲಿದೆ. ಬಳಿಕ ಟೆಂಡರ್ ಕರೆಯಲಾಗುವುದು.ಡಿ.ಮಹೇಶ್‌ಕುಮಾರ್, ಕಾರ್ಯನಿರ್ವಾಹಕ ನಿರ್ದೇಶಕ, ಚಾಮರಾಜೇಂದ್ರ ಮೃಗಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net