ಕುಡಿತ ಸಮಾಜಕ್ಕೆ ಅಂಟಿದ ಶಾಪ : ನವಚೇತನ ಶಿಬಿರದಲ್ಲಿ ವಿವೇಕ್ ವಿನ್ಸೆಂಟ್ ಪಾಯಸ್ ಅಭಿಮತ

01
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಸಪ್ತ ವ್ಯಸನಗಳಲ್ಲಿ ಮೊದಲನೆಯದೇ ಮದ್ಯಪಾನ ಎಂದು ಹೇಳಲಾಗುತ್ತದೆ. ಅಮಲಿನ ಭ್ರಮೆ ಮನುಷ್ಯನ ಆರ್ಥಿಕ, ಸಾಮಾಜಿಕ, ಸಾಂಸರಿಕ ಬದುಕಿನ ಸ್ಥಾನಮಾನ ನಾಶ ಮಾಡಿ ಆತನನ್ನು ಕೀಳು ಮಟ್ಟಕ್ಕೆ ಇಳಿಸುತ್ತದೆ. ಕುಡಿತ, ಅಮಲು ಪದಾರ್ಥ ಸೇವನೆ ಸಮಾಜಕ್ಕೆ ಅಂಟಿದ ಶಾಪ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಹೇಳಿದರು.

ಪರೀಕ ಸೌಖ್ಯವನದ ಕ್ಷೇಮ ಹಾಲ್‌ನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ನೇತೃತ್ವದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕ ಸಹಯೋಗದಲ್ಲಿ ಉಡುಪಿ ಜಿಲ್ಲಾ ಪೊಲೀಸರ ನವಚೇತನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಪೂರ್ಣವಾಗಿ ಬದುಕು ನಾಶ ಮಾಡುವ ಶಕ್ತಿ ವ್ಯಸನಕ್ಕಿದೆ. ಮಾದಕ ವಸ್ತು, ತಂಬಾಕು ಸೇವನೆ, ಮದ್ಯಪಾನ ಯುವ ಜನಾಂಗವನ್ನು ಅಧಃಪತನದೆಡೆಗೆ ತಳ್ಳುತ್ತಿದೆ. ದುಡಿಮೆ ದುಶ್ಚಟಗಳಿಗೆ ವಿನಿಯೋಗವಾಗುತ್ತಿದೆ. ಈ ನಿಟ್ಟಿನಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಶ್ರೀ ಧರ್ಮಸ್ಥಳ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ಮದ್ಯಮುಕ್ತ ವ್ಯಸನಿಗಳ ಶಿಬಿರಗಳು ಮದ್ಯವ್ಯಸನದಿಂದ ಅದೆಷ್ಟೋ ಕುಟುಂಬಗಳನ್ನು ಮುಕ್ತಗೊಳಿಸಿವೆ ಎಂದರು.

ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲ ಪೂಜಾರಿ ಮಾತನಾಡಿದರು. ಧರ್ಮಸ್ಥಳ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ಅವರು ವಿನ್ಸೆಂಟ್ ಪಾಯಸ್ ಅವರನ್ನು ಗೌರವಿಸಿದರು. ವ್ಯವಸ್ಥಾಪಕ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net