

ತುಮಕೂರು: ಎಲ್‌ಕೆಜಿ, ಯುಕೆಜಿ, 1ನೇ ತರಗತಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣದಿಂದ ಉಂಟಾಗುವ ಮಾನಸಿಕ ಪರಿಣಾಮದ ಬಗ್ಗೆ ನಿಮ್ಹಾನ್ಸ್ ತಜ್ಞ ವೈದ್ಯರ ವರದಿ ಆಧರಿಸಿ ಕ್ರಮವಹಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತೆ ಕುರಿತು ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐ ಹಾಗೂ ಬಿಇಒಗಳೊಂದಿಗಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಆನ್‌ಲೈನ್ ಶಿಕ್ಷಣಕ್ಕೆ ಒತ್ತು ಕೊಡಬೇಕಿದೆ. ಈ ಕುರಿತು ಸರ್ಕಾರ ಖಚಿತ ಆದೇಶ ಹೊರಡಿಸಲಿದೆ ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪುನರ್ಮನನ ತರಗತಿಗಳನ್ನು ಚಂದನ ವಾಹಿನಿ ಬಳಸಿಕೊಂಡು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಬಳಸಿಕೊಂಡು ಶಿಕ್ಷಣ ಬೋಧನೆ ಮಾಡುವ ಚಿಂತನೆ ಇದೆ. ಇನ್ನೂ ಮೂರು ಚಾನಲ್ ನೀಡುವಂತೆ ಕೇಂದ್ರ ಪ್ರಸಾರಭಾರತಿಗೆ ಮನವಿ ಮಾಡಲಾಗಿದೆ. ಜೂ.10 ರಿಂದ ಮತ್ತೆ ಚಂದನ ವಾಹಿನಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪುನರ್ಮನನ ತರಗತಿ ನಡೆಸಲಾಗುವುದು ಎಂದರು.
ಮಕ್ಕಳ ಸುರಕ್ಷತೆ, ಮಕ್ಕಳಲ್ಲಿ ಆತ್ಮವಿಶ್ವಾಸ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ತುಂಬುವುದು ಆದ್ಯತೆಯಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು. ಪರೀಕ್ಷೆ ನಡೆಯುವ ಅನುಮಾನಗಳನ್ನು ವಾಟ್ಸ್ ಆ್ಯಪ್‌ಗಳಲ್ಲಿ ಹರಿಯಬಿಡಲಾಗುತ್ತಿದೆ. ಆದರೆ, ಪರೀಕ್ಷೆ ಖಚಿತವಾಗಿ ನಡೆಯಲಿದೆ ಎಂಬುದನ್ನು ಮಕ್ಕಳಲ್ಲಿ ಮನವರಿಕೆ ಮಾಡಿಕೊಡಬೇಕಿದೆ. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಟ್ಯಾಗ್‌ಲೈನ್ ‘ಮಕ್ಕಳ ಸುರಕ್ಷತೆ, ಮಕ್ಕಳಲ್ಲಿ ಆತ್ಮವಿಶ್ವಾಸ’ ಆಗಿದೆ ಎಂದರು. ಜಿಪಂ ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಡಯಟ್ ಪ್ರಾಂಶುಪಾಲ ಮಂಜುನಾಥ್ ಇದ್ದರು.
ಸರ್ಕಾರಿ ಶಾಲೆಗಳ ಸಬಲೀಕರಣ: ಕರೊನಾದಿಂದ ಎಲ್ಲರೂ ಪಾಠ ಕಲಿಯಬೇಕಿದೆ. ಏಕೆಂದರೆ ಕೂಲಿಯವನೂ ಮಗುವನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾನೆ. ಇದಕ್ಕಾಗಿ ಅವನು ತನ್ನ ದುಡಿಮೆಯ ಶೇ.40 ಹಣವನ್ನು ಮಗುವಿನ ಶಿಕ್ಷಣಕ್ಕೆ ನೀಡುತ್ತಿದ್ದಾನೆ. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಇತ್ತ ಸೆಳೆದಾಗ, ಅಂತಹ ಕುಟುಂಬಗಳ ಆದಾಯ ಉಳಿಯುತ್ತೆ. ಇದರಿಂದ ಆರೋಗ್ಯವಾಗಿ ಬದುಕು ನಡೆಸಬಹುದು ಎಂದು ಸುರೇಶ್ ಕುಮಾರ್ ತಿಳಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ : ಈ ಬಾರಿ ರಾಜ್ಯದಲ್ಲಿ 8,48,200 ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದು, ಸ್ಕೌಟ್ಸ್- ಗೈಡ್ಸ್ ಮಕ್ಕಳು ತಯಾರಿಸಿರುವ 8.50 ಲಕ್ಷ ಮಾಸ್ಕ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು. ಪರೀಕ್ಷಾ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗುವುದು. ಅನಾರೋಗ್ಯದ ಸೂಚನೆ ಕಂಡು ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ಇರುತ್ತದೆ. ಕೊಠಡಿ ಮೇಲ್ವಿಚಾರಕರು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಜರ್ ಬಳಸಬೇಕು. ಪರೀಕ್ಷಾ ಕೇಂದ್ರದಲ್ಲಿ ಪರಸ್ಪರ ಅಂತರ, ಪ್ರತೀ ಕೊಠಡಿಗೆ 18 ರಿಂದ 20 ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಇರಲಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.
ವೆಂಟಿಲೇಟರ್‌ನಲ್ಲಿ ಯಾರೂ ಚಿಕಿತ್ಸೆ ಪಡೆಯುತ್ತಿಲ್ಲ : ರಾಜ್ಯದಲ್ಲಿ ಕರೊನಾ ಸೋಂಕಿತ ಒಬ್ಬನೇ ಒಬ್ಬ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು. ನಗರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವ ಸಿದ್ಧತೆ ಪ್ರಗತಿಪರಿಶೀಲನಾ ಸಭೆ ಬಳಿಕ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೊನಾ ಪರಿಸ್ಥಿತಿ ರಾಜ್ಯದಲ್ಲಿ ನಾವಂದುಕೊಂಡಷ್ಟು ಆತಂಕಕಾರಿಸ್ಥಿತಿ ಇಲ್ಲ. ಹಾಗಾಗಿ, ಆತಂಕಗೊಳ್ಳುವ ಅಗತ್ಯ ಇಲ್ಲ, ಎಚ್ಚರಿಕೆಯಿಂದ ಇರಬೇಕು. ಆದರೆ, ನಾವು ಆತಂಕಗೊಳ್ಳುತ್ತಿದ್ದು ಎಚ್ಚರಿಕೆಯಿಂದ ಇರುವುದನ್ನು ಮೈಮರೆಯುತ್ತಿದ್ದೇವೆ ಎಂದರು. ರಾಜ್ಯದಲ್ಲಿ 15 ಸೋಂಕಿತರು ತೀವ್ರ ನಿಗಾಘಟಕದಲ್ಲಿದ್ದರೆ, ಶನಿವಾರದವರೆಗೆ 1874 ಮಂದಿ ರಾಜ್ಯದ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 28 ಸಾವಿರ ಹಾಸಿಗೆಗಳನ್ನು ಕರೊನಾ ಸೋಂಕಿತರಿಗೆ ಮೀಸಲಿಟ್ಟು ಪ್ರತ್ಯೇಕ ಆಸ್ಪತ್ರೆಗಳನ್ನು ತೆರೆಯಲಾಗಿದೆ. ಶೇ.10 ರಷ್ಟು ಮಾತ್ರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖರಾಗುವ ಸಂಖ್ಯೆಯು ಜಾಸ್ತಿಯಾಗುತ್ತಿದೆ ಎಂದು ಪ್ರತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಆಯಾ ಜಿಲ್ಲೆಯಲ್ಲಿ ನಡೆಸುವ ಬಗ್ಗೆ ಎರಡ್ಮೂರು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಿಗದಿತ ದಿನಾಂಕಗಳಂದೇ ನಡೆಯಲಿವೆ. ವಲಸೆ ಕಾರ್ಮಿಕರ ಮಕ್ಕಳು ಪರೀಕ್ಷೆಯಿಂದ ತಪ್ಪಿಸಿಕೊಂಡರೆ ಜುಲೈನಲ್ಲಿ ಪರೀಕ್ಷೆ ನಡೆಸಲಾಗುವುದು. ಅಂತಹವರನ್ನು ಫ್ರೆಶರ್ಸ್ ವಿದ್ಯಾರ್ಥಿಗಳೆಂದು ಪರಿಗಣಿಸಲಾಗುವುದು. ಎಸ್.ಸುರೇಶ್‌ಕುಮಾರ್ ಸಚಿವ