

ಸದೇಶ್ ಕಾರ್ಮಾಡ್ ಮೈಸೂರು
ರಾಜ್ಯದಲ್ಲಿ ನಿವೇಶನ, ಕಟ್ಟಡ, ಭೂಮಿ ಮತ್ತಿತರ ಸ್ಥಿರಾಸ್ತಿಗಳ ಮಾರ್ಗಸೂಚಿ ದರ 2023ರಲ್ಲಿ ಪರಿಷ್ಕರಣೆಯಾಗಿದ್ದು, ಈ ಮಾರ್ಗ ಸೂಚಿ ದರ ಪರಿಷ್ಕರಣೆಗೆ ಅನುಗುಣವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಗರ ಪಾಲಿಕೆಯು ಆಸ್ತಿ ತೆರಿಗೆಯನ್ನು ಪರಿಷ್ಕರಿಸಿದ್ದು, ಇದರಿಂದ ನಗರದ ಜನರ ಮೇಲೆ ಪ್ರಸಕ್ತ ಆರ್ಥಿಕ ವರ್ಷದಿಂದ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕರ್ನಾಟಕ ಸ್ಟಾಂಪುಗಳ ಅಧಿನಿಯಮ-1975ರ ಸೆಕ್ಷನ್ 45ಬಿ ಅಡಿಯಲ್ಲಿ ಮಾರು ಕಟ್ಟೆ ಮೌಲ್ಯದ ದರ ಪರಿಷ್ಕರಣೆ ಮಾಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವಿವಿಧ ವರ್ಗಗಳ ಸ್ವತ್ತುಗಳ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗ ಪರಿಷ್ಕೃತ ಮಾರ್ಗಸೂಚಿ ದರವನ್ನು ಏ.1 ರಿಂದ ಅನ್ವಯ ಆಗುವಂತೆ ಪರಿಷ್ಕರಣೆ ಮಾಡಲಾಗಿದೆ. ನಗರ ಪಾಲಿಕೆ ಹೊಸದಾಗಿ ಆಸ್ತಿ ತೆರಿಗೆಯ ಹೆಚ್ಚಳ ಮಾಡಿಲ್ಲ. ಆದರೆ, ಆಸ್ತಿಗಳ ಮಾರುಕಟ್ಟೆ ಮೌಲ್ಯ ಹೆಚ್ಚಳದಿಂದ ಜನರು ಈ ಹಿಂದೆ ಪಾವತಿಸುತ್ತಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಪಾವತಿಸುವುದು ಅನಿವಾರ್ಯತೆ ನಿರ್ಮಾಣವಾಗಿದೆ. ಇದರಿಂದ ಜನರಿಗೆ ಪ್ರಸಕ್ತ ಆರ್ಥಿಕ ವರ್ಷದಿಂದ ಹೆಚ್ಚುವರಿ ಹೊರೆ ಬಿದ್ದಂತಾಗಿದೆ.
ಈ ಹಿಂದೆ 2019-20ರಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಾರ್ಗಸೂಚಿ ದರವನ್ನು ಪರಿಷ್ಕರಣೆ ಮಾಡಿದ್ದರಿಂದ 2020-21ನೇ ಸಾಲಿನಲ್ಲಿ ಪಾಲಿಕೆಯಲ್ಲಿ ಪರಿಷ್ಕೃತ ದರಗಳನ್ನು ಅಳವಡಿಸಿಕೊಳ್ಳಲಾಗಿತ್ತು. ನಂತರ ಮಾರ್ಗಸೂಚಿ ದರ ಪರಿಷ್ಕರಣೆ ಆಗದ ಕಾರಣ ಸರ್ಕಾರದ ಸುತ್ತೋಲೆಯಂತೆ 2021-22ರಲ್ಲಿ ಮತ್ತು 2022-23ರಲ್ಲಿ ಶೇ.3ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗಿತ್ತು. 2023-24ರಲ್ಲಿ ಕಾರಣಾಂತರದಿಂದ ಆಸ್ತಿ ತೆರಿಗೆ ದರ ಹೆಚ್ಚಳವಾಗಿಲ್ಲ. ಇದೀಗ 2024-25ನೇ ಸಾಲಿಗೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲಾಗಿದೆ.
ನಗರ ಪಾಲಿಕೆಗೆ ಆಸ್ತಿ ತೆರಿಗೆಯು ಪ್ರಮುಖ ಆದಾಯದ ಮೂಲವಾಗಿದ್ದು, ನಿವೇಶನ, ಮನೆ, ವಾಣಿಜ್ಯ ಕಟ್ಟಡ, ಕೈಗಾರಿಕೆ, ಉದ್ದಿಮೆಗಳು, ಸಿನಿಮಾ ಮಂದಿರ, ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ಮಾಲ್‌ಗಳು, ಶಾಲಾ-ಕಾಲೇಜುಗಳಿಂದ ಪಾಲಿಕೆಗೆ ಆಸ್ತಿ ತೆರಿಗೆ ಮೂಲಕ ಆದಾಯ ಸಂಗ್ರಹವಾಗುತ್ತದೆ. ರಸ್ತೆಯ ಅಗಲ, ಗೈಡ್‌ಲೈನ್ಸ್ ವ್ಯಾಲ್ಯೂ ಆಧಾರದ ಮೇಲೆ ನಗರ ಪಾಲಿಕೆಯು ಆಸ್ತಿಗಳ ಪರಿಷ್ಕೃತ ತೆರಿಗೆ ದರವನ್ನು ಪರಿಷ್ಕರಣೆ ಮಾಡಿದೆ.
ಆಸ್ತಿ ತೆರಿಗೆಯ ಜತೆಗೆ ಕಟ್ಟಡಗಳ ಬಾಡಿಗೆ, ನೀರಿನ ತೆರಿಗೆ ಮೂಲಕವೂ ನಗರ ಪಾಲಿಕೆ ಆದಾಯವನ್ನು ಕ್ರೋಢೀಕರಣ ಮಾಡುತ್ತದೆ. ನಗರ ಪಾಲಿಕೆಯು 2023ರಲ್ಲಿ 20 ವರ್ಷಗಳ ನಂತರ ಪಾಲಿಕೆಗೆ ಸೇರಿದ ಮಾರುಕಟ್ಟೆ ಮಳಿಗೆಗಳ ಬಾಡಿಗೆಯನ್ನು ಪರಿಷ್ಕರಣೆ ಮಾಡಿತ್ತು. ನಗರ ಪಾಲಿಕೆಗೆ ಸೇರಿದ 1941 ವಿವಿಧ ಮಾರುಕಟ್ಟೆ ಮಳಿಗೆಗಳು ಇವೆ. ಇವುಗಳ ಬಾಡಿಗೆ ಪರಿಷ್ಕರಣೆ ಕಡೆಯದಾಗಿ 29-4-2003ರಲ್ಲಿ ನಡೆದಿತ್ತು. ಅದಾದ ನಂತರ ಪಾಲಿಕೆ ಬಾಡಿಗೆ ಪರಿಷ್ಕರಣೆ ಮಾಡುವ ಗೋಜಿಗೆ ಹೋಗಿರಲಿಲ್ಲ. ಮಾರುಕಟ್ಟೆ ಮಳಿಗೆಗಳಿಂದ ವಾರ್ಷಿಕ 1.60 ಕೋಟಿ ರೂ. ಮಾತ್ರ ಸಂಗ್ರಹವಾಗುತ್ತಿತ್ತು. ಪರಿಷ್ಕೃತ ಬಾಡಿಗೆ ಜಾರಿಯಿಂದ 5 ಕೋಟಿ ರೂ.ಗಿಂತ ಹೆಚ್ಚಿನ ಆದಾಯವನ್ನು ಪಾಲಿಕೆ ನಿರೀಕ್ಷೆ ಮಾಡುತ್ತಿದೆ. ಪಾಲಿಕೆ ಮಳಿಗೆಗಳ ಬಾಡಿಗೆಯ ಜತೆಗೆ ಕುಡಿಯುವ ನೀರಿನ ತೆರಿಗೆಯನ್ನು ಸಹ ಹೆಚ್ಚಳ ಮಾಡಲು ನಗರ ಪಾಲಿಕೆ ಚಿಂತನೆ ನಡೆಸಿತ್ತು. ಆದರೆ, ನಗರದ ನಾಗರಿಕಗೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ನಗರ ಪಾಲಿಕೆ ಸದಸ್ಯರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ನೀರಿನ ದರ ಪರಿಷ್ಕರಣೆಯನ್ನು ಕೈಬಿಡಲಾಗಿತ್ತು.
ನಗರ ಪಾಲಿಕೆಯು ಸಾಕಷ್ಟು ಮನವಿ ಮಾಡಿಕೊಂಡರೂ ಸಾಕಷ್ಟು ಜನರು ತೆರಿಗೆ ಪಾವತಿಸಲು ಆಸಕ್ತಿ ತೋರುವುದಿಲ್ಲ. ಈ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಪಾವತಿಯನ್ನು ಉತ್ತೇಜಿಸುವ ಸಲುವಾಗಿ ನಗರ ಪಾಲಿಕೆಯು ಸಕಾಲದಲ್ಲಿ ತೆರಿಗೆ ಪಾವತಿಸುವವರಿಗೆ ಪ್ರತಿ ವರ್ಷ ಶೇ.5 ರಷ್ಟು ತೆರಿಗೆ ವಿನಾಯಿತಿ ನೀಡುತ್ತಾ ಬಂದಿದೆ. ಈ ಬಾರಿಯೂ ಸಹ ಈ ತೆರಿಗೆ ವಿನಾಯಿತಿಯನ್ನು ಮುಂದುವರೆಸಲಾಗಿದ್ದು, ಏಪ್ರಿಲ್ 30ರೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ.5ರಷ್ಟು ತೆರಿಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದು.
ನಗರ ಪಾಲಿಕೆಯಿಂದ ಯಾವುದೇ ರೀತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಿಲ್ಲ. ಮೂರು ವರ್ಷದ ಹಿಂದೆಯೇ ತೆರಿಗೆ ಹೆಚ್ಚಳ ಮಾಡಲಾಗಿತ್ತು. ಇದೀಗ ಸರ್ಕಾರ ಸ್ಟಾೃಂಪ್ ಡ್ಯೂಟಿ ದರ ಹೆಚ್ಚಳ ಮಾಡಿರುವುದರಿಂದ ಪಾಲಿಕೆಯಲ್ಲಿ ಅದಕ್ಕೆ ಪೂರಕವಾಗಿ ದರ ಪರಿಷ್ಕರಣೆ ಮಾಡಲಾಗುತ್ತಿದೆಯೇ ಹೊರತು ಪಾಲಿಕೆಯಿಂದ ತೆರಿಗೆ ಹೆಚ್ಚಳ ಮಾಡಿಲ್ಲ. ಪರಿಷ್ಕೃತ ದರದಂತೆ ನಗರದ ನಾಗರಿಕರು ಸಕಾಲದಲ್ಲಿ ತೆರಿಗೆ ಪಾವತಿಸುವ ಮೂಲಕ ಸಹಕಾರ ನೀಡಬೇಕು. ಸಾರ್ವಜನಿಕರು ಏ.30 ರೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ.5 ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದು.
ಡಾ.ಎನ್.ಎನ್. ಮಧು, ಪಾಲಿಕೆ ಆಯುಕ್ತೆ
ನೋಂದಣಿ ಮತ್ತು ಜಿಲ್ಲಾ ಮುದ್ರಾಂಕ ಇಲಾಖೆಯು ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಿಸಿದೆ. ನಗರ ಪಾಲಿಕೆ ಹೊಸದಾಗಿ ಆಸ್ತಿ ತೆರಿಗೆ ಏರಿಕೆ ಮಾಡದೆ ಹೋದರೂ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಯಿಂದ ಜನರು ಸ್ಥಿರಾಸ್ತಿಯ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಪಾವತಿಸುವುದು ಅನಿವಾರ್ಯ. ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ವೈಜ್ಞಾನಿಕವಾಗಿ ಮಾಡಿದರೆ ಜನರ ಮೇಲೆ ಆಗುವ ಹೆಚ್ಚುವರಿ ಹೊರೆ ತಪ್ಪಿಸಬಹುದಿತ್ತು.
ನಾರಾಯಣ ಗೌಡ, ಅಧ್ಯಕ್ಷ, ಜಿಲ್ಲಾ ಹೋಟೆಲ್ ಮಾಲೀಕರ ಸಂಘ