ಜಲಜೀವನ್ ಮಿಷನ್ ಅನುಷ್ಠಾನದ ಪರಿಶೀಲನೆ

23 HANUR 5
Published on

ಹನೂರು: ಜಲಜೀವನ್ ಮಿಷನ್ ಅನುಷ್ಠಾನ ಸಂಬಂಧ ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಪ್ಪನದೊಡ್ಡಿ ಗ್ರಾಮಕ್ಕೆ ಶುಕ್ರವಾರ ಕೇಂದ್ರ ಗ್ರಾಮೀಣ ಸಚಿವಾಲಯದ ನಿರ್ದೇಶಕ ಶಿವಶಂಕರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಗ್ರಾಪಂ ಕಚೇರಿಗೆ ಆಗಮಿಸಿದ ತಂಡದ ಅಧಿಕಾರಿಗಳು ಜೆಜೆಎಂ ಅನುಷ್ಠಾನ ಸಂಬಂಧ ಮಾಹಿತಿ ಪಡೆದು ದಾಖಲೆಗಳನ್ನು ಪರಿಶೀಲಿಸಿದರು. ಬಳಿಕ ಬಸಪ್ಪನದೊಡ್ಡಿ ಗ್ರಾಮಕ್ಕೆ ತೆರಳಿದ ಅಧಿಕಾರಿಗಳು ನಡೆದಿರುವ ಕಾಮಗಾರಿ ಹಾಗೂ ನೀರು ಸರಬರಾಜನ್ನು ಪರಿಶೀಲಿಸಿದರು. ಈ ವೇಳೆ ಕೆಲ ಸ್ಥಳೀಯರು ನಲ್ಲಿಗಳಲ್ಲಿ ನೀರು ಪೂರೈಕೆಯಾಗದಿರುವ ಬಗ್ಗೆ ದೂರಿದರು. ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದರು.

ಬಳಿಕ ನರೇಗಾ ಯೋಜನೆಯಡಿ ನಡೆದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಮಂಚಾಪುರ ಗ್ರಾಮಕ್ಕೆ ತೆರಳಿ ಕಾಮಗಾರಿಯನ್ನು ಪರಿಶೀಲಿಸಿದರು. ಗ್ರಾಮದ ಅಭಿವೃದ್ಧಿ ಹಾಗೂ ಜನರಿಗೆ ಅನುಕೂಲವಾಗುವಂತೆ ಇನ್ನು ಹೆಚ್ಚು ಕಾಮಗಾರಿಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕೇಂದ್ರೀಯ ವಿಜ್ಞಾನ ಅಂತರ್ಜಲ ಮಂಡಳಿಯ ನಿರ್ದೇಶಕಿ ಡಾ. ಬೇಬಿ ಶ್ವೇತಾ, ಇಂಜಿನಿಯರ್‌ಗಳಾದ ಜಗದೀಶ್, ಚಂದ್ರಶೇಖರಮೂರ್ತಿ, ಗ್ರಾಪಂ ಅಧ್ಯಕ್ಷ ಮುತ್ತುರಾಜು, ಸದಸ್ಯರಾದ ಮಾದೇವ, ಅನಿಲ್, ಮೋಹನ್, ಪಿಡಿಒ ಮಾದೇಶ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net