3 ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ

mayor badiger
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಅಭಿವೃದ್ಧಿ ಕಾಮಗಾರಿಗಳ ಕುರಿತು ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ಮೇಯರ್ ರಾಮಪ್ಪ ಬಡಿಗೇರ ಪ್ರಕಟಿಸಿದರು.

ಮೇಯರ್ ಆಗಿ ಅಯ್ಕೆಯಾದ ಬಳಿಕ ಪಾಲಿಕೆಯ ಮೊದಲ ಸಾಮಾನ್ಯ ಸಭೆಯಲ್ಲಿ ಮಂಗಳವಾರ ಭಾಷಣ ಮಾಡಿದ ಅವರು, ನೀರಿನ ಕರದ ಮೇಲಿನ ದಂಡದ ಮೊತ್ತವನ್ನು ಸಂಪೂರ್ಣ ಮನ್ನಾ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಎಲ್ಲ ಸದಸ್ಯರ ಸಹಕಾರ ಬಯಸುತ್ತೇನೆ ಎಂದರು.

ಅವಳಿ ನಗರದ ಎಲ್ಲ ವಾರ್ಡ್​ಗಳಲ್ಲಿ ಒಳಚರಂಡಿ ಜಾಲ ರೂಪಿಸಲು ವಿಸõತ ಯೋಜನಾ ವರದಿ ತಯಾರಿಸಿ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಿದ್ದೇನೆ. ಮನೆ ಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ಇನ್ನಷ್ಟು ಪ್ರಭಾವಶಾಲಿಯಾಗಿ ರೂಪಿಸಲಾಗುವುದು ಎಂದರು.

ಖಾತಾ ಬದಲಾವಣೆ ಹಾಗೂ ಇ-ಸ್ವತ್ತು ಸೃಜಿಸುವಲ್ಲಿ ವಿಳಂಬವಾಗುತ್ತಿದೆ. ವಿಳಂಬ ನೀತಿಗೆ ಕಡಿವಾಣ ಹಾಕಲು ಪಾಲಿಕೆಯ ವಲಯವಾರು ಕಚೇರಿಯಲ್ಲಿ ನಿಯಮಿತವಾಗಿ ಸಭೆ ನಡೆಸಲಾಗುವುದು. ಪ್ರತಿ ವಾರ್ಡ್​ಗಳಲ್ಲಿ ನಾಗರಿಕರನ್ನೊಳಗೊಂಡ ವಾರ್ಡ್ ಸಮಿತಿಯನ್ನು ಶೀಘ್ರದಲ್ಲೇ ರಚಿಸಲಾಗುವುದು. ‘ಮನೆ ಬಾಗಿಲಿಗೆ ಪಾಲಿಕೆ’ ಧ್ಯೇಯ ಘೊಷದೊಂದಿಗೆ ಪಾರದರ್ಶಕ ಆಡಳಿತ ನಡೆಸುವ ಮೂಲಕ ಅವಳಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುತ್ತೇನೆ. ಈ ನಿಟ್ಟಿನಲ್ಲಿ ಎಲ್ಲ ಸದಸ್ಯರು ಪಕ್ಷಬೇಧ ಮರೆತು ಕೈ ಜೋಡಿಸುವ ಅವಶ್ಯಕತೆ ಇದೆ ಎಂದರು.

ಪಾಲಿಕೆ ಸದಸ್ಯರಿಗೆ ಬಹುಮಾನ

ಪಾಲಿಕೆಯ ಮಾಸಿಕ ಸಾಮಾನ್ಯ ಸಭೆಯಲ್ಲಿ ಕೊನೆಯವರೆಗೂ ಇದ್ದು ಉತ್ತಮ ರೀತಿಯಲ್ಲಿ ಚರ್ಚೆ ನಡೆಸುವ ಸದಸ್ಯರಿಗೆ ಬಹುಮಾನ ನೀಡುವ ಉದ್ದೇಶ ಹೊಂದಿದ್ದೇನೆ ಎಂದು ಹೇಳಿದರು.

ಗೌನ್ ಧರಿಸಿದ ಮೇಯರ್

ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ ಇಂದು ಗೌನ್ ಧರಿಸಿ ಸಭೆ ನಡೆಸಿದರು. ಈ ಹಿಂದಿನ ಮೇಯರ್​ಗಳಾದ ಈರೇಶ ಅಂಚಟಗೇರಿ ಹಾಗೂ ವೀಣಾ ಬರದ್ವಾಡ ವರ್ಷಪೂರ್ತಿ ಗೌನ್ ಧರಿಸಿರಲಿಲ್ಲ.

ಗೌನ್ ಧರಿಸಿದಕ್ಕೆ ಪಾಲಿಕೆಯ ವಿರೋದ ಪಕ್ಷ ಸದಸ್ಯರು ಮೇಯರ್ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.

ಮೇಯರ್ ಸ್ಥಾನಕ್ಕೆ ಗೌರವವಿದೆ. ಈ ಸ್ಥಾನಕ್ಕೆ ಗೌರವ ಕೊಡುವ ಉದ್ದೇಶದಿಂದ ಗೌನ್ ಧರಿಸಿದ್ದೇನೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದವರು ಅಭಿನಂದಿಸುವ ಅಗತ್ಯವಿರಲಿಲ್ಲ. ಪ್ರೀತಿ ಪೂರ್ವಕವಾಗಿ ನೀವು ನೀಡಿದ ಹೂಗುಚ್ಛ ಸ್ವೀಕರಿದ್ದೇನೆ ಎಂದು ಮೇಯರ್ ರಾಮಪ್ಪ ಬಡಿಗೇರ ಹೇಳಿದರು.

ಇಂದು ನಿಗದಿತ ಸಮಯಕ್ಕೆ ಸರಿಯಾಗಿ ಪಾಲಿಕೆಯ ಸಾಮಾನ್ಯ ಸಭೆ ಆರಂಭಗೊಂಡು ಸಂಜೆಯವರೆಗೂ ನಡೆಯಿತು. ಕೋರಂ ಅಭಾವದಿಂದ ಅಥವಾ ಗೌಜಿ ಗದ್ದಲದಿಂದ ಸಭೆಯನ್ನು ನಿರ್ದಿಷ್ಟ ಅವಧಿಗೆ ಮುಂದೂಡಿದ ಘಟನೆ ನಡೆಯಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net