

ಮೈಸೂರು: ಪ್ರಸ್ತುತ ಕನ್ನಡ ಸಾಹಿತ್ಯ ವಿಮರ್ಶೆಯು ವಿನಯ ಪೂರ್ವಕವಾಗಿದೆಯೇ ಹೊರತು ಎದೆಗಾರಿಕೆಯಿಂದ ಕೂಡಿಲ್ಲ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಹಂಚೆ ವಿಷಾದಿಸಿದರು.
ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಕಲಾಕೂಟ, ಕಲ್ಪವೃಕ್ಷ ಟ್ರಸ್ಟ್ ಬುಧವಾರ ಆಯೋಜಿಸಿದ್ದ ‘ಡಾ.ಶಿವರಾಮ ಕಾರಂತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿ ಮೂಕಜ್ಜಿಯ ಕನಸುಗಳು 50- ಅವಲೋಕನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಲೇಖಕರನ್ನು ಓಲೈಸುವ ವಿಮರ್ಶೆ ಜಾಸ್ತಿಯಾಗುತ್ತಿದ್ದು, ನಿಷ್ಪಕ್ಷಪಾತವಾಗಿ ಕೃತಿಗೆ ಬೆಲೆಕಟ್ಟುವ ಕೆಲಸ ಕಡಿಮೆಯಾಗುತ್ತಿದೆ ಎಂದರು.
ಕಾರಂತರು ಸಾಹಿತ್ಯ ವಿಶ್ವಕೋಶದಂತೆ. ಅವರ ಒಂದೊಂದು ವಿಚಾರವು ವೈಚಾರಿಕತೆಯಿಂದ ಕೂಡಿದೆ. ಕಾರಂತರು ವಿಶ್ವ ಕಂಡ ಶ್ರೇಷ್ಠ ಚಿಂತಕರಾಗಿದ್ದರು. ಮನುಷ್ಯನ ಬದುಕಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಿದ್ದರು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್ ‘ಮೂಕಜ್ಜಿಯ ಕನಸುಗಳು’ ಕೃತಿ ಕುರಿತು ಮಾತನಾಡಿ, ಕಾರಂತರು ಮಲೆನಾಡಿನ ಪ್ರದೇಶಕ್ಕೆ ಸೀಮಿತವಾದವರಲ್ಲ, ವಿಶ್ವಸಾಹಿತ್ಯಕ್ಕೆ ಸೇರಿದವರು. ಇವರ ವೈಚಾರಿಕ ವಿಶ್ಲೇಷಣೆಗಳು ಮೂಕಜ್ಜಿಯ ಕನಸುಗಳಲ್ಲಿ ವ್ಯಕ್ತವಾಗಿವೆ. ಈ ಕೃತಿಯು ಕಾರಂತರ ಬಗ್ಗೆ ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕಿ ವಿಭಿನ್ನ ನೆಲೆಯಲ್ಲಿ ಯೋಚಿಸುವಂತೆ ಮಾಡಿದೆ. ಇಡೀ ಕಾದಂಬರಿ ಜೀವನದ ಸಂಬಂಧವನ್ನು ಕುರಿತು ಹೇಳುತ್ತದೆ. ಇಲ್ಲಿ ಯಾವುದೇ ಕಥಾ ನಾಯಕ-ನಾಯಕಿ ಇರದೆ ಮೂಕಾಂಬಿಕೆಯ ಮುಖಾಂತರವೇ ಕಾರಂತರು ವಿಶ್ಲೇಷಣೆಯನ್ನು ಮಾಡುತ್ತಾರೆ. ಇಲ್ಲಿ ವಿಧವೆಯರನ್ನು ಸಮಾಜ ನೋಡುವ ರೀತಿ, ಹೆಣ್ಣಿನ ಶೋಷಣೆ, ಸಮಾಜದ ನಂಬಿಕೆ-ಅಪನಂಬಿಕೆಗಳ ಬಗ್ಗೆ ವಿಸ್ತೃತವಾದ ಚರ್ಚೆಯನ್ನು ಹಲವು ಪಾತ್ರಗಳ ಮುಖಾಂತರ ವ್ಯಕ್ತಪಡಿಸಿದ್ದಾರೆ ಎಂದರು.
ಕವಯತ್ರಿ ಡಾ.ಲತಾ ರಾಜಶೇಖರ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಪ್ರಾಂಶುಪಾಲರಾದ ಡಾ.ಎಂ.ಶಾರದಾ, ಉಪಪ್ರಾಂಶುಪಾಲ ಡಾ.ಜಿ.ಪ್ರಸಾದಮೂರ್ತಿ ಇತರರಿದ್ದರು.