

ಹುಬ್ಬಳ್ಳಿ: ತಮ್ಮ ಮನೆದೇವರು ಯಲ್ಲಮ್ಮದೇವಿಗೆ ಹೊತ್ತಿದ್ದ ಹರಕೆ ತೀರಿಸಲು ಯುವಕನೋರ್ವ ಟ್ರ್ಯಾಕ್ಟರ್ ರಿವರ್ಸ್ (ಹಿಮ್ಮುಖ) ಗಿಯರ್ ನಲ್ಲಿ ಚಲಾಯಿಸಿಕೊಂಡು ಹೋಗುವ ಮೂಲಕ ದಾಖಲೆ ಬರೆದಿದ್ದಾನೆ.
ತಾಲೂಕಿನ ಮಂಟೂರ ಗ್ರಾಮದ 22 ವರ್ಷದ ಯುವಕ ಬಾಬುಗೌಡ ಚಂದ್ರುಗೌಡ ಪರ್ವತಗೌಡ್ರ ಈ ಸಾಧನೆ ಮಾಡಿದಾತ.
ವೃತ್ತಿಯಿಂದ ಕೃಷಿಕರಾಗಿರುವ ಬಾಬುಗೌಡ ಅವರು ಕಳೆದ ಐದಾರು ವರ್ಷದಿಂದ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದಾರೆ. ನಿತ್ಯ ಹೊಲಮನೆಯ ಕೆಲಸಕ್ಕೆ ಬಳಸುತ್ತಾರೆ. ಆದರೆ, ರಿವರ್ಸ್ ಗಿಯರ್ ನಲ್ಲಿ ಹೊಡೆಯುವುದು, ಅದು ಕೂಡ ಬಹುದೂರದ ವರೆಗೆ ತೆಗೆದುಕೊಂಡು ಹೋಗುವುದನ್ನು ಮಾಡಿರಲಿಲ್ಲ.
ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಾಯಿಸಿಕೊಂಡು ನಿನ್ನ ದರ್ಶನಕ್ಕೆ ಬರುತ್ತೇನೆ ಎಂದು ಬಾಬುಗೌಡರು ಹರಕೆ ಹೊತ್ತುಕೊಂಡಿದ್ದರು. ಅದರಂತೆ ಸೆಪ್ಟೆಂಬರ್ 2ರಂದು ಬೆಳಗ್ಗೆ 6.15ಕ್ಕೆ ಮಂಟೂರಿನ ವಲಂಬೇಶ್ವರ ದೇವಸ್ಥಾನದಿಂದ ಹಿಮ್ಮುಖ ಪ್ರಯಾಣ ಆರಂಭಿಸಿದರು.
ಕುಸುಗಲ್ಲ, ಬ್ಯಾಹಟ್ಟಿ, ತೀರ್ಲಾಪುರ, ಅಳಗವಾಡಿ, ಹಂಚಿನಾಳ, ಚಿಕ್ಕುಂಬಿ, ಹಿರೇಕುಂಬಿ ಹಾಗೂ ಉಗರಗೋಳ ಮೂಲಕ ಸವದತ್ತಿಗೆ ಬಂದು ಅಲ್ಲಿಂದ ಯಲ್ಲಮ್ಮನಗುಡ್ಡ ತಲುಪಿದರು.
ಮಧ್ಯಾಹ್ನ 1.30ಕ್ಕೆ ಇವರು ಯಲ್ಲಮ್ಮನ ಗುಡ್ಡ ಪ್ರವೇಶಿಸಿ ಹರಕೆ ತೀರಿಸಿದರು. ಗುಡ್ಡದಲ್ಲಿ ಇವರನ್ನು ಸ್ವಾಗತ ಮಾಡಿದ ಗ್ರಾಮಸ್ಥರು, ಬಂಡಾರ ಹಚ್ಚಿ ಬರಮಾಡಿಕೊಂಡರು. ಸಾಧಕನಿಗೆ ಸನ್ಮಾನಿಸಿ ಸಂಭ್ರಮಪಟ್ಟರು.
ಸುಮಾರು 75 ಕಿ.ಮೀ. ಅಂತರದ ದೂರವನ್ನು ಒಟ್ಟು 7 ತಾಸು 30 ನಿಮಿಷದಲ್ಲಿ ಕ್ರಮಿಸುವ ಮೂಲಕ ದಾಖಲೆ ಬರೆದಿದ್ದಾರೆ.
ಮರೆತು ಮುಂದೆ ಗಿಯರ್ ಹಾಕಬಾರದು ಎಂದು ಗಿಯರ್ ಬಾಕ್ಸ್ಗೆ ಬಟ್ಟೆ ಕಟ್ಟಿ ಕೇವಲ ರಿವರ್ಸ್ ಗಿಯರ್ ನಲ್ಲಿ ಚಾಲನೆ ಮಾಡಿದ್ದಾನೆ. ಒಂದೇ ಒಂದು ಹೆಜ್ಜೆ ಮುಂದೆ ಹೋಗಿಲ್ಲ. ಗುಡ್ಡದ ವರೆಗೂ ರಿವರ್ಸ್ ಗಿಯರ್ ನಲ್ಲೆ ಟ್ರ್ಯಾಕ್ಟರ್ ಚಲಾಯಿಸಿರುವುದು ಇದೊಂದು ದಾಖಲೆಯಾಗಿದೆ' ಎಂದು ನೂಲ್ವಿಯ ಬಾಬುಗೌಡರ ಮಾವ ಬಸನಗೌಡ ಮರಿಚನ್ನಪ್ಪಗೌಡ್ರ ಅಭಿಮಾನದಿಂದ ಹೇಳಿದರು.