ಕಾಡಾನೆ ಓಡಿಸಲು ಕಂದಾಯ, ಅರಣ್ಯ ಇಲಾಖೆ ನಿರ್ಲಕ್ಷೃ

N.M.Nagesh BALE (BJP)
Published on

ಎನ್.ಆರ್.ಪುರ: ಕಾಡಾನೆಗಳ ಹಾವಳಿ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಜನಪ್ರತಿನಿಧಿಗಳು, ಅರಣ್ಯ ಹಾಗೂ ಕಂದಾಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಲಾಗವುದು ಎಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ತಿಳಿಸಿದ್ದಾರೆ.

ಅರಣ್ಯ ಇಲಾಖೆಗೆ ಕಾಡಾನೆಗಳನ್ನು ಓಡಿಸಲು ಸಾಧ್ಯವಾಗದಿದ್ದರೆ ರೈತರು ಹಾಗೂ ಕಾರ್ಮಿಕರನ್ನು ಒಳಗೊಂಡ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಸಾವಿರಾರು ಜನರೊಂದಿಗೆ ಆನೆ ಓಡಿಸುವ ಕೆಲಸ ಮಾಡಬೇಕಾಗುತ್ತದೆ. ಸಮಿತಿ ಕಳೆದ 5 ವರ್ಷದಿಂದ ಪಕ್ಷಾತೀತವಾಗಿ ಮಲೆನಾಡಿನ ರೈತರ, ಕಾರ್ಮಿಕರ ಪರವಾದ ಹೋರಾಟ ನಡೆಸುತ್ತಿದೆ. ಅನೇಕ ಬಾರಿ ಸಭೆ ನಡೆಸಿ ಮನವಿ ಮಾಡಿ ಪತ್ರ ಚಳವಳಿ ಮೂಲಕ ನಮ್ಮ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡರೆ ಜನಪ್ರತಿನಿಧಿಗಳು,ಅಧಿಕಾರಿಗಳು ಕೇವಲ ಅಶ್ವಾಸನೆ ನೀಡಿ ಹೋಗುತ್ತಾರೆ. ಮಲೆನಾಡಿನ ರೈತರ, ಕಾರ್ಮಿಕರ ಸಂಕಷ್ಟಗಳಿಗೆ ಧ್ವನಿಯಾಗುವ ಕೆಲಸ ಮಾಡುತ್ತಿಲ್ಲ ಎಂದು ಹೇಳಿಕೆಯಲ್ಲಿ ದೂರಿದ್ದಾರೆ.

ಬಗರ್‌ಹುಕಂ ಅಡಿಯಲ್ಲಿ ಜಮೀನು ಪಡೆದ ರೈತರಿಗೆ ಪೋಡಿ ಮಾಡಿಸಲು ಹೋದರೆ ಅರಣ್ಯಇಲಾಖೆ ತಕರಾರು ತೆಗೆಯುತ್ತಿದೆ. ಅರಣ್ಯಇಲಾಖೆಯು ಕಂದಾಯ ಭೂಮಿಯನ್ನು ಸೆಕ್ಷನ್-4 ಮಾಡಿರುವ ಕ್ರಮ ಅವೈಜ್ಞಾನಿಕವಾಗಿದೆ. ಆ ಜಮೀನಿಗಳಲ್ಲಿ ಶಾಲೆ, ದೇವಸ್ಥಾನ, ಚರ್ಚೆ ಕೂಡ ಸೇರಿದೆ. ಇದನ್ನು ನಿಲ್ಲಿಸಬೇಕು ಎಂದು ರೈತ ಹಿತ ರಕ್ಷಣಾ ಸಮಿತಿ ಹೋರಾಟ ಮಾಡುತ್ತಿದೆ. ಈಗ ಅದೇ ಜಮೀನುಗಳನ್ನು ಅರಣ್ಯ ಇಲಾಖೆ ಸೆಕ್ಷನ್17 ಮಾಡಲು ಹೊರಟಿದೆ. ಕೂಸ್ಗಲ್ ಅರಣ್ಯ ವ್ಯಾಪ್ತಿಗೆ ಬರುವ 11 ಗ್ರಾಮಗಳನ್ನು ಭದ್ರಾವನ್ಯಜೀವಿ ವಲಯಕ್ಕೆ ಹಸ್ತಾಂತರ ಮಾಡಲು ಹೊರಟಿದ್ದಾರೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಜನರ ಧ್ವ್ವನಿಯಾಗಬೇಕಾದ ಕ್ಷೇತ್ರದ ಶಾಸಕರು ಹಾಗೂ ಸಂಸದರು ಮೌನವಾಗಿದ್ದಾರೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net