

ಇಂಡಿ: ಇಂಡಿ, ಸಿಂದಗಿ, ದೇವರಹಿಪ್ಪರಗಿ, ಆಲಮೇಲ ಮತ್ತು ಚಡಚಣ ತಾಲೂಕಿನಲ್ಲಿ ಸಂಭವಿಸಿರುವ ರೈತ ಆತ್ಮಹತ್ಯೆ ಪ್ರಕರಣಗಳನ್ನು ಬೇಗ ಇತ್ಯರ್ಥಪಡಿಸಿ ಅವರಿಗೆ ಪರಿಹಾರ ಒದಗಿಸಬೇಕು ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಸೂಚಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಕಂದಾಯ ಉಪ ವಿಭಾಗಾಧಿಕಾರಿ ಕಚೇರಿಯ ಸಭಾಭವನದಲ್ಲಿ ಬುಧವಾರ ನಡೆದ ರೈತ ಆತ್ಮಹತ್ಯೆ ಪ್ರಕರಣಗಳ ಕುರಿತ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ರೈತ ಆತ್ಮಹತ್ಯೆ ಪ್ರಕರಣ ನಡೆದರೆ ಬೇಗ ಅಗತ್ಯ ದಾಖಲೆ ಪಡೆದು ಬೇಗ ಪರಿಹಾರ ಸಿಗುವಂತೆ ಪ್ರಯತ್ನಿಸಬೇಕು. ರೈತರ ಆತ್ಮಹತ್ಯೆ ಪ್ರಕರಣದ ಅಂತಿಮ ವರದಿಯನ್ನು ಪೊಲೀಸ್ ಇಲಾಖೆ 15 ದಿನದೊಳಗೆ ಕಂದಾಯ ಇಲಾಖೆ ಕಚೇರಿಗೆ ತಲುಪಿಸಬೇಕು. ರೈತ ಆತ್ಮಹತ್ಯೆಯಾದರೆ ಐದು ಲಕ್ಷ ರೂ. ಪರಿಹಾರ ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಆಕಸ್ಮಿಕವಾಗಿ ಮರಣ ಹೊಂದಿದರೆ ಎರಡು ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದರು.
ಇಂಡಿಯ ನಾಲ್ಕು ಸೇರಿ ಒಟ್ಟು 9 ಆತ್ಮಹತ್ಯೆ ಪ್ರಕರಣಗಳನ್ನು ಇಂದು ಇತ್ಯರ್ಥಪಡಿಸಲಾಯಿತು. ಹಾವು ಕಡಿದು ಮರಣ ಹೊಂದಿದ ಇಬ್ಬರು ರೈತರ ಪ್ರಕರಣ ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಮರಣ ಹೊಂದಿದ 2 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.
ಡಿವೈಎಸ್‌ಪಿ ಜಗದೀಶ ಎಚ್.ಎಸ್., ಇಂಡಿಯ ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಚಡಚಣ ತಹಸೀಲ್ದಾರ್ ಸಂಜಯ ಇಂಗಳೆ, ಅಧಿಕಾರಿಗಳಾದ ಎಚ್.ವೈ.ಸಿಂಗಾಗೋಳ, ಪ್ರದೀಪ ಹಿರೇಮಠ, ಪ್ರಕಾಶ ಸಿಂದಗಿ, ಸುರೇಶ ಚಾವಲಾರ, ಧನಪಾಲಶೆಟ್ಟಿ ದೇವೂರ, ಸಿಪಿಐ ಮಲ್ಲಿಕಾರ್ಜುನ ಡಪ್ಪಿನ ಇತರರಿದ್ದರು.