ಕಂದಾಯ ಸೇವೆಗಳು ಮನೆ ಬಾಗಿಲಿಗೆ

23-pnp 4
ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಅರ್ಹ ಫಲಾನುಭವಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಕ್ಕು ಪತ್ರ ವಿತರಿಸಿದರು. ತಹಸೀಲ್ದಾರ್ ಎಸ್.ಸಂತೋಷ್, ಆರ್.ಎ.ನಾಗಣ್ಣ, ಶ್ಯಾಮ್ ಇತರರು ಇದ್ದರು.
Published on

ಪಾಂಡವಪುರ: ಕಂದಾಯ ಇಲಾಖೆಯ ಸೇವೆಗಳು ಸಮರ್ಪಕವಾಗಿ ಮನೆ ಬಾಗಿಲಿಗೆ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ಪೌತಿ ಖಾತೆ ಆಂದೋಲನ ಹಾಗೂ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾಹಿತಿ ನೀಡಿದರು.

ತಾಲೂಕಿನ ರಾಗಿಮುದ್ದನಹಳ್ಳಿಯಲ್ಲಿರುವ ಗುಮ್ಮನಹಳ್ಳಿ ಗ್ರಾಪಂ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಪೌತಿ ಖಾತೆ ಆಂದೋಲನ ಹಾಗೂ ನಿವೇಶನಗಳ ಹಕ್ಕು ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಂದಾಯ ಗ್ರಾಮವಾದ ರಾಗಿಮುದ್ದನಹಳ್ಳಿ ಗ್ರಾಮದ 567ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿರುವುದು ವೈಯಕ್ತಿಕವಾಗಿ ಮನಸ್ಸಿಗೆ ಸಂತಸ ಕೊಟ್ಟಿದೆ. ಕಂದಾಯ ಇಲಾಖೆಯ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಜನರಿಗೆ ತಲುಪಿಸಲು ತಿಂಗಳಿಗೊಮ್ಮೆ ಪ್ರತಿ ಗ್ರಾಮದಲ್ಲಿ ಇಂತಹ ಕಾರ್ಯಕ್ರಮ ರೂಪಿಸಿ ಸರ್ಕಾರಿ ಕೆಲಸಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು. ಸರ್ಕಾರಿ ಕಾರ್ಯಕ್ರಮಗಳಿಗೆ ಜನ ಸ್ವಂದನೆ ಬಹುಮುಖ್ಯ. ಕಂದಾಯ ಇಲಾಖೆಯ ಅಗತ್ಯ ಕೆಲಸ ಕಾರ್ಯಗಳು ನಿಗದಿತ ಸಮಯಕ್ಕೆ ಆಗಬೇಕಾದರೆ ಸೂಕ್ತ ದಾಖಲೆ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ತಹಸೀಲ್ದಾರ್ ಸಂತೋಷ್ ಮಾತನಾಡಿ, ಹಲವು ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿರುವ ರೈತರು ಮತ್ತು ಬಡವರ ಕೆಲಸ ಕಾರ್ಯಗಳಿಗೆ ಆದಷ್ಟು ಬೇಗ ಮುಕ್ತಿ ನೀಡುವಂತೆ ಶಾಸಕರು ಸೂಚನೆ ನೀಡಿದ್ದಾರೆ. ತಮ್ಮ ಮನೆ, ಜಮೀನಿನ ಯಾವುದೇ ಕೆಲಸ ಕಾರ್ಯಗಳಿಗೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದರು.

ಶಾಸಕರಿಗೆ ಮನವಿ:

ಗ್ರಾಮದ ಹಿರಿಯ ಮುಖಂಡ ಆರ್.ಎ.ನಾಗಣ್ಣ ಮಾತನಾಡಿ, ನಮ್ಮ ಗ್ರಾಮ ಕಂದಾಯ ಕಂದಾಯ ಗ್ರಾಮವಾಗಿ 6 ವರ್ಷಗಳಾಗಿದ್ದರೂ ಯಾವುದೇ ಅಭಿವೃದ್ಧಿ ಕಂಡಿಲ್ಲ. ಗ್ರಾಮದಲ್ಲಿ ಸರ್ವೇ ಕೆಲಸ ಪೂರ್ಣಗೊಂಡಿಲ್ಲ. ದಾಖಲೆಗಳಲ್ಲಿ ಗುಮ್ಮನಹಳ್ಳಿ, ರಾಗಿಮುದ್ದನಹಳ್ಳಿ ಗ್ರಾಮಗಳ ಹೆಸರು ಬದಲಾಗುತ್ತಿದ್ದು, ಗೊಂದಲ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಪಶು ಆಸ್ಪತ್ರೆಯಾಗಬೇಕಿದೆ. ಸಾರಿಗೆ ಸಮಸ್ಯೆಯನ್ನು ಶಾಸಕ ದರ್ಶನ್ ಪರಿಹರಿಸಿದ್ದಾರೆ. ಆದರೆ ಬಸ್ ನಿಲ್ದಾಣ ಮಾಡಿಕೊಡಬೇಕು. ಮುರಾರ್ಜಿ ಶಾಲೆ ರಸ್ತೆ, ಡಿಂಕಾ ರಸ್ತೆ ಅಭಿವೃದ್ಧಿಗೊಳಿಸಬೇಕು ಎಂದು ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷ ರಘು, ಉಪಾಧ್ಯಕ್ಷೆ ರಾಧಾ, ಸದಸ್ಯರಾದ ರಾಜೇಗೌಡ, ಸ್ವಾಮಿ, ಮುಖಂಡರಾದ ಶ್ಯಾಮ್, ರಾ.ಸ.ಹನುಮಂತೇಗೌಡ, ಮಹೇಶ್, ಮಂಜುನಾಥ್ ಪಿಡಿಒ ರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net