ಕಂದಾಯ ದಾಖಲೆ ಕೊಡಿಸಿ

05mdk03
Published on

ಮಡಿಕೇರಿ:

ಕಳೆದ ವರ್ಷ ರಾಜ್ಯಸ ಸರ್ಕಾರ 'ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ' ಎನ್ನುವ ಕಾರ್ಯಕ್ರಮ ನಡೆಸಿತ್ತು. ಕ್ರಾಂತಿಕಾರಿ ಎಂದು ಬಿಂಬಿಸಲಾಗಿದ್ದ ಈ ಕಾರ್ಯಕ್ರಮದ ಮೂಲಕ ಕೊಡಗಿನಲ್ಲಿ ಸುಮಾರು 68 ಸಾವಿರ ಕುಟುಂಬಗಳು 4.60 ಲಕ್ಷ ಪುಟಗಳಷ್ಟು ದಾಖಲೆಗಳನ್ನು ಉಚಿತವಾಗಿ ಪಡೆದುಕೊಂಡಿದ್ದರು. ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಈ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತ್ತು. ಹಲವರು ವಿವಿಧ ಕಾರಣಗಳಿಗೆ ಈಗಲೂ ಪ್ರಮುಖ ದಾಖಲೆಗಳಿಂದ ವಂಚಿತರಾಗಿದ್ದು, ಸರ್ಕಾರ ಮತ್ತೊಮ್ಮೆ ಇಂತಹ ಕಾರ್ಯಕ್ರಮ ನಡೆಸುವಂತೆ ಒತ್ತಾಯ ಕೇಳಿಬರುತ್ತಿದೆ.

ಅಗತ್ಯ ದಾಖಲಾತಿಗಳಿಗಾಗಿ ರೈತರು, ಬಡವರು ಕಂದಾಯ ಇಲಾಖೆ ಕಚೇರಿಗಳಿಗೆ ವಿನಾ ಕಾರಣ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಈ ಹಿಂದಿನ ಸರ್ಕಾರ 'ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ' ಎನ್ನುವ ಯೋಜನೆ ರೂಪಿಸಿತ್ತು. ರಾಜ್ಯಾದ್ಯಂತ ಏಕಕಾಲದಲ್ಲಿ ಅನುಷ್ಠಾನಕ್ಕೆ ಬಂದ ಈ ಯೋಜನೆಯಲ್ಲಿ ಸುಮಾರು 2 ಕೋಟಿ ಪುಟಗಳಷ್ಟು ಕಂದಾಯ ದಾಖಲಾತಿಗಳನ್ನು ಉಚಿತವಾಗಿ ಮನೆ ಮನೆಗೆ ತಲುಪಿಸಲಾಗಿತ್ತು. ‘ಇದು ಕಂದಾಯ ಇಲಾಖೆಯಲಿ ್ಲಆಗಿರುವ ಕ್ರಾಂತಿ. ಇದು ಜನರ ಬಳಿಗೆ ದಾಖಲೆ ಅಲ್ಲ, ಸರ್ಕಾರವನ್ನೇ ಜನರ ಮನೆಗೆ ಕರೆದು ತಂದಿದೆ,’ ಎಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದರು.

ಕಂದಾಯ ದಾಖಲಾತಿಗಳನ್ನು ಪಡೆದುಕೊಳ್ಳಲು ಎಷ್ಟು ಕಷ್ಟ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸ್ವಾತಂತ್ರö್ಯ ಸಿಕ್ಕಿ 75 ವರ್ಷ ಕಳೆದರೂ ಹೆಚ್ಚಿನ ಸಂಖ್ಯೆಯ ರೈತರು ತಮ್ಮ ಜಮೀನಿನ ದಾಖಲೆಗಳನ್ನೇ ನೋಡಿಲ್ಲ ಎನ್ನುವ ಕಾರಣ ನೀಡಿ ಸರ್ಕಾರ ಈ ಮಹತ್ವದ ಯೋಜನೆ ಆರಂಭಿಸಿತ್ತು. ಹಲವರು ತಮ್ಮ ದಾಖಲೆಗಳನ್ನು ಪಡೆಯಲು ಕಚೇರಿ, ನೆಮ್ಮದಿ ಕೇಂದ್ರ ಎಂದು ಸುತ್ತಾಡಿಯೇ ಸುಸ್ತಾಗುತ್ತಿದ್ದರು. ಕೊನೆಗೆ ಬೇಸತ್ತು ಸುಸ್ತಾಗಿ ಸಹವಾಸವೇ ಬೇಡ ಎಂದು ಕೈಚೆಲ್ಲಿ ಕುಳಿತವರೂ ಇದ್ದಾರೆ. ಆಡಳಿತ ವ್ಯವಸ್ಥೆಯ ವಿಳಂಬ ನೀತಿಯ ಪಾಲು ಕೂಡ ಇದರಲ್ಲಿ ದೊಡ್ಡದಿದೆ. ಆದರೆ ಹಿಂದಿನ ಸರ್ಕಾರ 'ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ' ಯೋಜನೆ ಮೂಲಕ ಯಾವುದೇ ಶುಲ್ಕ ಇಲ್ಲದೇ ದಾಖಲೆಗಳು ಫಲಾನುಭವಿಗಳ ಕೈ ಸೇರುವಂತೆ ಮಾಡಿತ್ತು.

ಹಾಗಾಗಿಯೇ ಕಂದಾಯ ಇಲಾಖೆ 5 ಕೋಟಿಗೂ ಅಧಿಕ ದಾಖಲೆಗಳನ್ನು ಸುಮಾರು 62ಲಕ್ಷ ರೈತರಿಗೆ ತಲುಸಲು ನಿರ್ಧರಿಸಿ ಈ ಕಾರ್ಯಕ್ರಮ ರೂಪಿಸಿತ್ತು. 2022ರ ಮಾರ್ಚ್ನಲ್ಲಿ ಜಾರಿಗೆ ಬಂದ 'ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ' ಕಾರ್ಯಕ್ರಮದ ಅಡಿಯಲ್ಲಿ ರೈತರ ಹಕ್ಕು ನಿರ್ಧರಿಸುವ ಪಹಣಿ, ಜಮೀನು ನಕ್ಷೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಿಂಚಣಿ ಸೇರಿ ಇನ್ನಿತರ ಕಂದಾಯ ದಾಖಲೆ ಪತ್ರಗಳು ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಆಗಿತ್ತು. ಇದರಿಂದಾಗಿ ಬೋಗಸ್ ದಾಖಲೆ, ದಾಖಲೆಯಲ್ಲಿ ತಪ್ಪು, ಅಪ್‌ಡೆಟ್ ಅಗತ್ಯವೂ ಈ ಸಂದರ್ಭ ಗಮನಕ್ಕೆ ಬರುವಂತಾಗಿತ್ತು.

ಆಯಾ ಗ್ರಾಮ ಮಟ್ಟದ ಗ್ರಾಮ ಲೆಕ್ಕಿಗರ ಮೂಲಕ ಫಲಾನುಭವಿಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಿತ್ತು. ಪಿಡಿಎಫ್‌ನಲ್ಲಿದ್ದ ದಾಖಲೆಗಳನ್ನು ಆಯಾ ಜಿಲ್ಲೆಯಲ್ಲಿಯೇ ಮುದ್ರಣಾಲಯಗಳಲ್ಲಿ ಎ 4 ಅಳತೆ ಹಾಳೆಗಳಲ್ಲಿ ಮುದ್ರಿಸಿ ದಾಖಲೆ ಹೊಂದಿರುವ ಲಕೋಟೆಗಳನ್ನು ತಹಸೀಲ್ದಾರ್ ಹಂತದಲ್ಲಿ ಕುಟುಂಬ ಮತ್ತು ಗ್ರಾಮವಾರು ವಿಂಗಡಣೆ ಮಾಡಿ ಎಲ್ಲೂ ಗೊಂದಲ ಆಗದಂತೆ ರೈತರಿಗೆ ವಿತರಣೆ ಮಾಡುವ ಜವಾಬ್ದಾರಿಯನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ ಕೊಡಲಾಗಿತ್ತು.

ಕೊಡಗಿನಲ್ಲಿ 67,993 ಕುಟುಂಬಗಳು ಈ ಯೋಜನೆಯ ಲಾಭ ಪಡೆದುಕೊಂಡಿದ್ದವು. 1,31,899 ಪುಟಗಳಷ್ಟು ಆರ್‌ಟಿಸಿಯ ಪಿಡಿಎಫ್ ಪ್ರತಿಗಳು 2,76,103 ಪುಟಗಳಷ್ಟು ಆರ್‌ಟಿಸಿ, 59,905 ಪುಟಗಳಷ್ಟು ಕಂದಾಯ ದಾಖಲಾತಿಗಳು, 1,662 ಪುಟಗಳಷ್ಟು ಕಂದಾಯ ನಕಾಶೆಗಳು, 91,465 ಪುಟಗಳಷ್ಟು ಜಾತಿ ಪ್ರಮಾಣ ಪತ್ರ, 40,015 ಪುಟಗಳಷ್ಟು ಆದಾಯ ಪ್ರಮಾಣ ಪತ್ರ ಸೇರಿದಂತೆ ಒಟ್ಟು 4,69,150 ಪುಟಗಳಷ್ಟು ಕಂದಾಯ ದಾಖಲಾತಿಗಳನ್ನು ಇಲಾಖೆ ಸಿಬ್ಬಂದಿ ಜಿಲ್ಲೆಯ ಫಲಾನುಭವಿಗಳ ಮನೆ ಮನೆಗೆ ತಲುಪಿಸಿದ್ದರು.

ಹಲವಾರು ಕಾರಣಗಳಿಂದ ಇನ್ನು ಕೂಡ ಸಾಕಷ್ಟು ಕುಟುಂಬಗಳು ತಮ್ಮ ಹಕ್ಕು ನಿರ್ಧರಿಸುವ ಕಂದಾಯ ದಾಖಲಾತಿಗಳಿಂದ ವಂಚಿತರಾಗಿದ್ದಾರೆ. ಈಗಿನ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭ ಇಂತಹ ಕೆಲವೊಂದು ದಾಖಲಾತಿಗಳ ಅಗತ್ಯವಿದ್ದು, ನಾಡ ಕಚೇರಿಗಳಿಗೆ ತೆರಳಿದ ಸಂದರ್ಭ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಒಂದು ದಾಖಲಾತಿ ಪಡೆದುಕೊಳ್ಳಲು ಮತ್ತೊಂದು ಪೂರಕ ದಾಖಲಾತಿ ತರಲು ಸೂಚಿಸಲಾಗುತ್ತಿದೆ.

‘ಕಂದಾಯ ದಾಖಲೆ ಮನೆ ಬಾಗಿಲಿಗೆ,’ ಯೋಜನೆ ಮತ್ತೊಮ್ಮೆ ಜಾರಿಗೆ ಬಂದರೆ ದೊಡ್ಡ ಸಂಖ್ಯೆಯಲ್ಲಿ ಬಡವರಿಗೆ ಅನುಕೂಲ ಆಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹಳೆಯ ಯೋಜನೆಯಲ್ಲಿ ಮತ್ತೊಂದಿಷ್ಟು ಮಾರ್ಪಾಡು ಮಾಡಿ ಇನ್ನೂ ಕೆಲವು ಅಗತ್ಯ ದಾಖಲಾತಿಗಳನ್ನೂ ನೇರವಾಗಿ ಮನೆಗೆ ತಲುಪಿಸುವಂತಾದರೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೂ ಪೂರಕವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

‘ಕಂದಾಯ ದಾಖಲೆ ಮನೆ ಬಾಗಿಲಿಗೆ,’ ಯೋಜನೆಯಡಿ ಕಂದಾಯ ಇಲಾಖೆಯ
ವತಿಯಿಂದ ಸಾರ್ವಜನಿಕರಿಗೆ ವಿತರಿಸುತ್ತಿರುವ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಮುದ್ರಿಸಿ ಪ್ಲಾಸ್ಟಿಕ್ ಲಕೋಟೆಯಲ್ಲಿರಿಸಿ ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲಾಗಿತ್ತು. ಈ ಯೋಜನೆ 2022ರ ಒಂದು ಬಾರಿ ಯೋಜನೆ ಆಗಿದೆ.
ಕೃಷ್ಣ ಬೈರೇಗೌಡ, ಕಂದಾಯ ಸಚಿವ

‘ಕ0ದಾಯ ದಾಖಲೆ ಮನೆ ಬಾಗಿಲಿಗೆ,’ ಹಿಂದಿನ ಸರ್ಕಾರ ಅನುಷ್ಠಾನಕ್ಕೆ ತಂದಿದ್ದ ಉತ್ತಮ ಯೋಜನಗೆಳಲ್ಲಿ ಒಂದು ಇದರಿಂದ ಸಾಕಷ್ಟು ಸಂಖ್ಯೆಯಲ್ಲಿ ಬಡ ರೈತರಿಗೆ ಅನುಕೂಲ ಆಗಿತ್ತು. ಕಂದಾಯ ಇಲಾಖೆಯಲ್ಲಿ ಜನಸಾಮಾನ್ಯರನ್ನು ಯಾವ ರೀತಿ ಅಲೆದಾಡಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಇಂತಹ ಸಂದರ್ಭದಲ್ಲಿ ಯೋಜನೆ ದೊಡ್ಡ ಕ್ರಾಂತಿ ಮಾಡಿತ್ತು. ಈಗಿನ ಕಂದಾಯು ಸಚಿವರು ಕೂಡ ಅತ್ಯುತ್ಸಾಹಿ ಆಗಿದ್ದು, ದೂರದೃಷ್ಟಿ ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಅವಧಿಯಲ್ಲೂ ಅಂಥ ಯೋಜನೆ ಜಾರಿಗೆ ಬಂದರೆ ಮತ್ತಷ್ಟು ಬಡವರಿಗೆ ಅನುಕೂಲ ಆಗುತ್ತದೆ.
ಹೆಚ್.ಎಸ್. ಅಶೋಕ, ಮಾಜಿ ಅಧ್ಯಕ್ಷ, ಕೊಡಗು ಜಿ.ಪಂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net