ಸಭೆಯಲ್ಲಿ ರೀಲ್ಸ್​ ನೋಡಿ ಪೇಚಿಗೆ ಸಿಲುಕಿದ ಅಧಿಕಾರಿಗಳು !

Reels
Published on

ತುಮಕೂರು: ಕಂದಾಯ ಪ್ರಗತಿಗೆ ಸಂಬಂಧಿಸಿದಂತೆ ಸಚಿವ ಕೃಷ್ಣಬೈರೇಗೌಡ ಗಂಭೀರವಾದ ಸಭೆ ನಡೆಸುತ್ತಿದ್ದ ವೇಳೆ ಕೆಲ ಅಧಿಕಾರಿಗಳು ಮೊಬೈಲ್​ನಲ್ಲಿ ರೀಲ್ಸ್​ ನೋಡುವುದರಲ್ಲಿ ಮಗ್ನರಾಗಿದ್ದು ಕಂಡುಬಂತು!

ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೂ ನಿರಂತರವಾಗಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಬಹಳ ಗಂಭೀರವಾಗಿ ಸಭೆ ನಡೆಸಿದರೆ, ಕೆಲವು ಅಧಿಕಾರಿಗಳು ಮೊಬೈಲ್​ನಲ್ಲಿ ರೀಲ್ಸ್​ಗಳನ್ನು ನೋಡುತ್ತಿದ್ದದು ಕಂಡು ಬಂತು. ಈ ದೃಶ್ಯಗಳನ್ನು ಸಭಾಂಗಣದಲ್ಲಿ ಮೇಲ್ಭಾಗದಲ್ಲಿ ಕುಳಿತಿದ್ದ ದೃಶ್ಯ ಮಾಧ್ಯಮಗಳ ಕ್ಯಾಮೆರಾಮೆನ್​ಗಳು ಸೆರೆಹಿಡಿದರು. ಅಧಿಕಾರಿಗಳು ರೀಲ್ಸ್​ ನೀಡುವ ದೃಶ್ಯ ಕ್ಷಣ ಕಾಲದಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡರಲ್ಲದೆ ಯಾರೂ ಮೊಬೈಲ್​ ಹೊರತೆಗೆಯದಂತೆ ಆಪ್ತ ಸಹಾಯಕರ ಮೂಲಕ ಸಂದೇಶ ರವಾನಿಸಿದರು.

ಪ್ರಗತಿ ಪರಿಶೀಲನಾಸಭೆ ಭಾಗವಹಿಸಿದ್ದ ಇಲಾಖೆ ಅಧಿಕಾರಿಗಳ ಪೈಕಿ ತಹಸೀಲ್ದಾರ್​, ಉಪವಿಭಾಗಾಧಿಕಾರಿಗಳಿಗೆ ಮಾತ್ರ ಸಭೆ ಸೀಮಿತವಾಗಿಯೇ ನಡೆಯುತ್ತಿತ್ತು. ಸಚಿವರ ಸಭೆಯಾದ್ದರಿಂದ ಜಿಲ್ಲೆಯ ಎಲ್ಲಾ ವೃತ್ತಗಳಿಂದ ಕೆಳಹಂತದ ಅಧಿಕಾರಿಗಳೆಲ್ಲರೂ ಸುಮ್ಮನೆ ಕುಳಿತಿದ್ದರು ಈ ಸಂದರ್ಭದಲ್ಲಿ ಅಚಾನಕ್​ ಆಗಿ ಮೊಬೈಲ್​ ತೆಗೆದು ರೀಲ್ಸ್​ ನೋಡಿದ್ದು ಅವಾಂತರಕ್ಕೆ ಕಾರಣವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net