

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಹಲವು ದಶಕಗಳಿಂದ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಬಡವರಿಗೆ ಮನೆಯ ಭೂ ಮಾಲೀಕತ್ವಕ್ಕಾಗಿ ಹಕ್ಕು ಪತ್ರ ನೀಡಲಾಗುತ್ತಿದೆ. ಆದರೆ, ಕೆಲವೆಡೆ ಅನರ್ಹರಿಗೆ ಹಕ್ಕುಪತ್ರ ನೀಡಿರುವುದು ಗಮನಕ್ಕೆ ಬಂದಿದ್ದು, ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಸಿದರು.
ನಗರದ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನೂರಾರು ಜನವಸತಿ ಪ್ರದೇಶಗಳು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಇರಲಿಲ್ಲ. ಅವುಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಅರ್ಹರಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ತಹಸೀಲ್ದಾರರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದರು.
ಖೊಟ್ಟಿ ದಾಖಲೆ ನೀಡಿದ್ದರೆ ಕ್ರಮ: ಬೆಳಗಾವಿ ನಗರ ಸೇರಿ ವಿವಿಧೆಡೆ ಅನುಮತಿ ಇಲ್ಲದೆ ಕೃಷಿಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸಲಾಗುತ್ತಿದ್ದು, ಅದನ್ನು ಪರಿಶೀಲಿಸಬೇಕು. ಅಂತಹ ಆಸ್ತಿಗಳಿಗೆ ಗ್ರಾಪಂಗಳು ಕಂಪ್ಯೂಟರ್ ಸೇರಿ ಇತರ ದಾಖಲೆ ನೀಡಿದ್ದರೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದರು.
ಪೋಡಿಮುಕ್ತ ಗ್ರಾಮ ಅಭಿಯಾನ ಯಶಸ್ವಿಯಾಗಲಿ: ರಾಜ್ಯದಲ್ಲಿ ಅಂದಾಜು 4.71 ಲಕ್ಷ ಎಕರೆ ಜಮೀನು ಮೃತರ ಹೆಸರಿನಲ್ಲಿದ್ದು, ಸಂಬಂಧಿಸಿದವರು ನೋಂದಣಿ ಮಾಡಿಕೊಂಡಿಲ್ಲ. ಹೀಗಾಗಿ ಆಂದೋಲನ ರೀತಿಯಲ್ಲಿ ಆಸ್ತಿಗಳ ವಾರಸಾ ಮಾಡಬೇಕು. ಜತೆಗೆ ಪೋಡಿಮುಕ್ತ ಗ್ರಾಮ ಅಭಿಯಾನ ಯಶಸ್ವಿಯಾಗಿ ನಡೆಸಬೇಕು. ಕಚೇರಿಗಳಿಗೆ ಸಾರ್ವಜನಿಕರ ಅಲೆದಾಟ ಸಂಪೂರ್ಣ ತಪ್ಪಿಸಬೇಕು ಎಂದು ಸೂಚಿಸಿದರು.
ಈಗಾಗಲೇ ಕಂದಾಯ ಇಲಾಖೆಯಲ್ಲಿ ಅಕ್ರಮ ತಡೆಗಟ್ಟಲು ಭೂ ಸುರಕ್ಷಾ ಯೋಜನೆಯಡಿ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತಿದ್ದು, ಪ್ರಾಯೋಗಿಕವಾಗಿ 4 ಸಾವಿರ ದಾಖಲೆ ಆನ್‌ಲೈನ್ ಮೂಲಕ ವಿತರಿಸಲಾಗಿದೆ. ಅಧಿಕಾರಿಗಳು ಇ-ಆಫೀಸ್‌ನಡಿ ಕಾರ್ಯ ನಿರ್ವಹಿಸಬೇಕು. ಈ ಕುರಿತು ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದರು. ಎಂಎಲ್‌ಸಿ ನಾಗರಾಜ ಯಾದವ, ಕಂದಾಯ ಇಲಾಖೆ ಆಯುಕ್ತ ಪಿ.ಸುನೀಲಕುಮಾರ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಸಿಇಒ ರಾಹುಲ ಶಿಂಧೆ ಇತರರಿದ್ದರು.
ಸಭೆಯಲ್ಲಿ ಚರ್ಚಿಸಿದ ಪ್ರಮುಖ ವಿಷಯಗಳು
ಪ್ರಜಾಸೌಧ ನಿರ್ಮಾಣಕ್ಕೆ 8.60 ಕೋಟಿ ರೂ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ಎರಡು ವರ್ಷದಲ್ಲಿ ಹೊಸದಾಗಿ ರಚನೆಯಾದ 64 ತಾಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ತಲಾ 8.60 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಆಡಳಿತ ಅನುಕೂಲಕ್ಕಾಗಿ ಎಲ್ಲ ಇಲಾಖೆಗಳಿಗೆ ಸ್ವಂತ ಕಟ್ಟಡಗಳ ಲಭ್ಯವಾಗಲಿವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.