

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರೈತರಿಗೆ ಸಂಬಂಧಿಸಿದ ಕಂದಾಯ ಇಲಾಖೆಯ ಕೆಲಸ ಕಾರ್ಯಗಳಿಗೆ ಪ್ರಥಮ ಆದ್ಯತೆ ನೀಡಿ, ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಹೇಳಿದರು. ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ನೌಕರರ ಸಂಘ,ರಾಜ್ಯ ಸರ್ಕಾರಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಮತ್ತು ರಾಜ್ಯ ಕಂದಾಯ ಇಲಾಖಾ ಗ್ರಾಮ ಸಹಾಯಕ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ, 2024 ನೇ ಸಾಲಿನ ಕಂದಾಯ ದಿನಾಚರಣೆ ಮತ್ತು ಕಂದಾಯ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಂದಾಯ ಇಲಾಖೆ ಎಲ್ಲ ಇಲಾಖೆಗಳ ಮಾತೃ ಆಗಿ ಕೆಲಸ ನಿರ್ವಹಣೆ ಮಾಡುತ್ತಿದೆ. ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತಮ ರೀತಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಿರಿ. ತಾವುಗಳು ಕಚೇರಿ ಕೆಲಸದ ಜತೆಯಲ್ಲಿ ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ವಹಿಸಿ, ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಕಂದಾಯ ಅಧಿಕಾರಿಗಳು ಅಧಿಕಾರದಲ್ಲಿ ಇದ್ದೇನೆ ಅಂತಾ ಅಧಿಕಾರ ಚಲಾಯಿಸುವುದು ಬೇಡ. ಜನರಿಗೆ ಅಗತ್ಯ ಸೇವೆಯನ್ನು ಸಕಾಲದಲ್ಲಿ ನೀಡುವ ಮೂಲಕ ಸರ್ಕಾರಿ ಕೆಲಸದಲ್ಲಿದ್ದೇನೆ ಎನ್ನುವ ತೃಪ್ತಿ ಪಡಿಬೇಕು. ನಿಮ್ಮ ಸಮಸ್ಯೆ ಹಾಗೂ ಕುಂದುಕೊರತೆಗಳ ಮನವಿಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಈಗಾಗಲೇ ಗ್ರಾಮ ಲೆಕ್ಕಾಧಿಕಾರಿಗಳ ಕೆಲಸಕ್ಕೆ ಅಗತ್ಯ ಸವಲತ್ತುಗಳನ್ನು ವಿತರಿಸಲು ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿದೆ ಎಂದರು.
ಡಿಸಿಗೆ ಮನವಿ: ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುದೀಪ್ ಕಂದಾಯ ಇಲಾಖೆಯ ಕಚೇರಿ ಕೆಲಸಕ್ಕೆ ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ನೌಕರರ ಪರ ಮನವಿ ಮಾಡಿಕೊಂಡರು. ಇದಕ್ಕೂ ಮುನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಂದಾಯ ಇಲಾಖಾ ಕಚೇರಿಯಲ್ಲಿ ಸೇವೆ ಸಲ್ಲಿಸಿ, ಸೇವಾ ನಿವೃತ್ತಿಯಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸನ್ಮಾನಿಸುವ ಮೂಲಕ ಬೀಳ್ಕೊಡಲಾಯಿತು.