

ಕಮತಗಿ: ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ನಿಧಿ ಯೋಜನೆಗಳಿಂದ 2025-26 ನೇ ಸಾಲಿನಲ್ಲಿ 13.46 ಕೋಟಿ ರೂ. ಆದಾಯ ನಿರೀಕ್ಷೆಯೊಂದಿಗೆ 4.56 ಲಕ್ಷ ರೂ. ಉಳಿತಾಯ ಬಜೆಟ್ ಹೊಂದಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ರಮೇಶ ಜಮಖಂಡಿ ತಿಳಿಸಿದರು.
ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದ ಸವಾರ್ಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಪಪಂ ಕಾರ್ಯಾಲಯದ ಕಾಯಂ ಸಿಬ್ಬಂದಿಗೆ ವೈದ್ಯಕೀಯ ವೆಚ್ಚ ಮರು ಸಂದಾಯ ಮಾಡುವುದು, ನೀರು ಸರಬರಾಜು ಸಾಮಗ್ರಿ ಪೂರೈಕೆ, ಮೋಟಾರ್ ದುರಸ್ತಿ, ಪ್ರಿಂಟಿಂಗ್, ಸ್ಟೇಷನರಿ ಸಾಮಗ್ರಿ ಖರೀದಿ, ಬೀದಿ ದೀಪಕ್ಕೆ ಸಾಮಗ್ರಿ ಪೂರೈಕೆ ಹಾಗೂ ಇನ್ನಿತರ ನಿರ್ವಹಣೆಯ ವಾರ್ಷಿಕ ಟೆಂಡರ್ ಅವಧಿಯನ್ನು ಮುಂದುವರಿಸಲಾಗುವುದು ಎಂದರು.
2025-26 ನೇ ಸಾಲಿಗೆ ಹೊರಗುತ್ತಿಗೆ ಆಧಾರದ ಮೇಲೆ ಆರೋಗ್ಯ ವಿಭಾಗ, ನೀರು ಸರಬರಾಜು ವಿಭಾಗ ಹಾಗೂ ಕಂಪ್ಯೂಟರ್ ಡೇಟಾ ಎಂಟ್ರಿಗೆ ಮಾನವ ಸೇವೆ ಪಡೆಯಲು, ಸರ್ವೇ ನಂಬರ್ 62/ಅ/7 ರ ವಸತಿ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ ಜಮೀನಿನ ವಿನ್ಯಾಸ ನಕ್ಷೆಗೆ, ಸರ್ವೇ ನಂಬರ್ 1/4, 2/5 ರ ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ ಏಕ ನಿವೇಶನ ಜಮೀನಿನ ವಿನ್ಯಾಸ ನಕ್ಷೆಗೆ ಹಾಗೂ ಸರ್ವೆ ನಂಬರ್ 207/2, 207/3 ರ ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ ಏಕ ನಿವೇಶನ ಜಮೀನಿನ ವಿನ್ಯಾಸ ನಕ್ಷೆಗೆ ಸಭೆ ಅನುಮೋದನೆ ನೀಡಿತು.
ಡೇ ನಲ್ಮ ಯೋಜನೆಯಡಿ ಕಾಫಿ ಕಿಸ್ಕೋ ಸೆಂಟರ್ ತೆರೆಯಲು ಸ್ಥಳ ಗುರುತಿಸುವುದು, ನೀರಿನ ಕರ ಹಾಗೂ ಆಸ್ತಿ ತೆರಿಗೆ ವಸೂಲಾತಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳನ್ನು ತೊಡಗಿಸಿಕೊಳ್ಳುವ ಬಗ್ಗೆ ಚರ್ಚಿಸಿ ಅನುಮೋದನೆ ಪಡೆಯಲಾಯಿತು.
ಉಪಾಧ್ಯಕ್ಷೆ ನೇತ್ರಾವತಿ ನಿಂಬಲಗುಂದಿ, ಸದಸ್ಯರಾದ ಗುರು ಪಾಟೀಲ, ಚಂದು ಕುರಿ, ಬಸವರಾಜ ಕುಂಬಳಾವತಿ, ಸಂಗಪ್ಪ ಗಾಣಿಗೇರ, ದೇವಿಪ್ರಸಾದ ನಿಂಬಲಗುಂದಿ, ಪ್ರಕಾಶ ಶಿನ್ನೂರ, ನಂದಾ ದ್ಯಾಮಣ್ಣವರ, ಮಂಜುಳಾ ಮುರಾಳ, ಮುಖ್ಯಾಧಿಕಾರಿ ಎ್.ಎನ್. ಹುಲ್ಲಿಕೇರಿ ಮತ್ತಿತರರಿದ್ದರು.