ಕಂದಾಯ ಸೇವೆ ಉಡುಪಿ ಅಗ್ರಣಿ

Compuer
Published on

ಉಡುಪಿ: ಕಂದಾಯ ಇಲಾಖೆ ವ್ಯಾಪ್ತಿ ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಉಡುಪಿ ಜಿಲ್ಲಾಡಳಿತ ಸತತ ಐದು ತಿಂಗಳಿಂದ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿದೆ.

ಕಂದಾಯ ಇಲಾಖೆ ಸೇವೆ ಅನುಷ್ಠಾನದಲ್ಲಿ ಜನವರಿ ತಿಂಗಳ ಜಿಲ್ಲಾವಾರು ಸಾಧನೆ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ್ದು, ಉಡುಪಿ 100ರಲ್ಲಿ 69 ಅಂಕ ಪಡೆದಿದೆ. 56.5 ಅಂಕ ಪಡೆದಿರುವ ಚಿತ್ರದುರ್ಗ 2ನೇ ಸ್ಥಾನ, 50.9 ಅಂಕಗಳೊಂದಿಗೆ ಉತ್ತರ ಕನ್ನಡ 3ನೇ ಸ್ಥಾನದಲ್ಲಿದೆ. ಬಳ್ಳಾರಿ ಜಿಲ್ಲೆ 14.6 ಅಂಕ ಪಡೆದು ಕೊನೆಯ ಸ್ಥಾನದಲ್ಲಿದ್ದರೆ (30), ಧಾರವಾಡ 16.7, ಯಾದಗಿರಿ 17.2 ಅಂಕಗಳೊಂದಿಗೆ ಕ್ರಮವಾಗಿ 29 ಹಾಗೂ 28ನೇ ಸ್ಥಾನಗಳಲ್ಲಿವೆ.

 ರ‌್ಯಾಂಕ್ ಹೇಗೆ?: ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೋರ್ಟ್‌ನಲ್ಲಿರುವ ಪ್ರಕರಣಗಳ ವಿಲೇವಾರಿ, ಪಹಣಿಯಲ್ಲಿರುವ ಕಾಲಂ 3 ಹಾಗೂ 9ರ ದೋಷ ಸರಿಪಡಿಸುವಿಕೆ, 79ಎ ಹಾಗೂ 79ಬಿ ಪ್ರಕರಣಗಳ ವಿಲೇವಾರಿ, ಪೈಕಿ ಆರ್‌ಟಿಸಿ ತಿದ್ದುಪಡಿ, ಭೂಮಿ ಪೋಡಿ, ಜಮೀನು ಸರ್ವೆ, ಹೀಗೆ, ಆಯಾ ಜಿಲ್ಲೆಗಳ ಕಂದಾಯ ಇಲಾಖೆ ಕಾರ್ಯ ಸಾಧನೆ ಆಧಾರದ ಮೇಲೆ ಅಂಕ ನೀಡಲಾಗುತ್ತದೆ. ಕಂದಾಯ ಸೇವೆಗಳನ್ನು ನಿಗಧಿತ ಕಾಲಮಿತಿಯೊಳಗೆ ಜನರಿಗೆ ತಲುಪಿಸಿದರೆ ರ‌್ಯಾಂಕ್ ಪಟ್ಟಿಯಲ್ಲಿ ಮೇಲೇರಬಹುದು. ರೈತರಿಗೆ ಭೂಮಿ ಮ್ಯುಟೇಷನ್ ವಿತರಣೆ, 30 ದಿನಗಳೊಳಗೆ ಭೂಮಿ ಮ್ಯುಟೇಷನ್ ನೀಡುವುದು, ಕಾಲಮಿತಿಯಲ್ಲಿ ಭೂ ವ್ಯಾಜ್ಯಗಳನ್ನು ಪರಿಹರಿಸಿ ಭೂಮಿ ಮ್ಯುಟೇಷನ್ ಹಂಚಿಕೆ, ವಸತಿ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಕೃಷಿ ಭೂಮಿ ಪರಿವರ್ತನೆ ಮಾಡುವ ಮೂಲಕ ಜಿಲ್ಲೆ ಮೊದಲ ಸ್ಥಾನ ಪಡೆದಿದೆ.

ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿ ಉಡುಪಿ ಜಿಲ್ಲೆಯಲ್ಲಿ ಫಲಾನುಭವಿಗಳ ಮನೆಬಾಗಿಲಿಗೆ ಪಿಂಚಣಿ ತಲುಪಿಸಲಾಗುತ್ತಿದೆ. ಬಡವರಿಗೆ ಕಂದಾಯ ಸೇವೆಗಳನ್ನು ಪ್ರಾಮಾಣಿಕವಾಗಿ ತಲುಪಿಸುವುದು ನಮ್ಮ ಆಶಯ. ಮೊದಲ ಸ್ಥಾನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಡಳಿತ ಯಂತ್ರಕ್ಕೆ ಮತ್ತಷ್ಟು ಚುರುಕು ನೀಡಲಾಗುವುದು. - ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net