

ರೋಣ: ಕಂದಾಯ ಇಲಾಖೆಯಲ್ಲಿ ಹೊಸ ಹೊಸ ವ್ಯವಸ್ಥೆ ಜಾರಿ ಮಾಡುವಲ್ಲಿ ಸಚಿವ ಕೃಷ್ಣ ಬೈರೇಗೌಡ ಮುಂದಾಗಿದ್ದು, ಇಲಾಖೆ ಸಂಪೂರ್ಣ ಡಿಜಿಟಲೀಕರಣವಾಗಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಕಂದಾಯ ಇಲಾಖೆ, ಜಿಲ್ಲಾಡಳಿತ ಹಾಗೂ ರೋಣ ತಾಲೂಕು ಆಡಳಿತ ವತಿಯಿಂದ ಇಲ್ಲಿಯ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ರೋಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಂದಾಯ ಇಲಾಖೆಯಲ್ಲಿನ ಕೆಲಸ ಕಾರ್ಯಗಳನ್ನು ಸರಳೀಕರಣಗೊಳಿಸುವ ಹೊಣೆ ಗ್ರಾಮ ಆಡಳಿತ ಅಧಿಕಾರಿಗಳ ಮೇಲಿದೆ. ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ಇ- ಆಸ್ತಿ ಡಿಜಿಟಲೀಕರಣದಲ್ಲಿ ಮುಂಡರಗಿ ತಾಲೂಕು ಶೇ. 100ರಷ್ಟು ಸಾಧನೆ ಮಾಡಿದೆ. ರೋಣ ಹಾಗೂ ಗಜೇಂದ್ರಗಡ ತಾಲೂಕು ಶೇ. 95ರಷ್ಟು ಸಾಧನೆ ಮಾಡಿವೆ ಎಂದರು.
ರೋಣ ತಹಸೀಲ್ದಾರ್ ನಾಗರಾಜ ಕೆ. ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಅವರು ಇದ್ದಲ್ಲಿಯೇ ಕಾರ್ಯನಿರ್ವಹಿಸಬೇಕು ಎಂಬ ಕಾರಣದಿಂದ ಅವರಿಗೆ ಲ್ಯಾಪ್‌ಟಾಪ್ ವಿತರಿಸಲಾಗುತ್ತಿದೆ ಎಂದರು.
ಗಜೇಂದ್ರಗಡ ತಹಸೀಲ್ದಾರ್ ಕಿರಣಕುಮಾರ, ಮುಂಡರಗಿ ತಹಸೀಲ್ದಾರ್ ಪಿ.ಎಸ್. ಎರ‌್ರಿಸ್ವಾಮಿ, ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಉಪಾಧ್ಯಕ್ಷ ಹನುಮಂತ ತಳ್ಳಿಕೇರಿ, ವಿವಿಧ ಭಾಗದ ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.
ಫೋಟೋ- 30 ರೋಣ- 2
ರೋಣದಲ್ಲಿ ಸೋಮವಾರ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ನಾಗರಾಜ ಕೆ., ಕಿರಣಕುಮಾರ, ಪಿ.ಎಸ್. ಎರ‌್ರಿಸ್ವಾಮಿ, ಬಸಮ್ಮ ಕೊಪ್ಪದ, ಹನುಮಂತ ತಳ್ಳಿಕೇರಿ ಇದ್ದರು.