ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ, ಜಮೀನು ದಾಖಲೀಕರಣ ಪ್ರಕ್ರೀಯೆ ತ್ವರಿತಗೊಳಿಸಲು ಆಯುಕ್ತ ಪಿ.ಸುನೀಲ ಕುಮಾರ ಸೂಚನೆ

REVENUE OFFICE MEETING
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಆಯುಕ್ತ ಪಿ.ಸುನೀಲ ಕುಮಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಡಿಸಿ ಸೋಮಲಿಂಗ ಗೆಣ್ಣೂರು, ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ಮತ್ತಿತರರಿದ್ದಾರೆ.
Published on

ವಿಜಯಪುರ: ಭೂ ಸುರಕ್ಷತೆ ದೃಷ್ಟಿಕೋನದಿಂದ ಜಮೀನು ದಾಖಲೀಕರಣ ಪ್ರಕ್ರೀಯೆಯನ್ನು ತ್ವರಿತಗೊಳಿಸಿ ಪೂರ್ಣಗೊಳಿಸುವಂತೆ ಕಂದಾಯ ಇಲಾಖೆ ಆಯುಕ್ತ ಪಿ.ಸುನೀಲ ಕುಮಾರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ಕಂದಾಯ ಇಲಾಖೆ ವಿವಿಧ ವಿಷಯಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಪ್ರತಿದಿನ ಒಬ್ಬ ಆಪರೇಟರ್ ಒಂದು ಸಾವಿರದಿಂದ 2 ಸಾವಿರ ರೂ.ದಷ್ಟು ದಾಖಲೀಕರಣ ಕಾರ್ಯ ತ್ವರಿತಗೊಳಿಸುವ ಮೂಲಕ ದಾಖಲೀಕರಣ ಕಾರ್ಯಕ್ಕೆ ವೇಗ ನೀಡಿ, ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ರೈತರು ತಮ್ಮ ಜಮೀನಿನ ಮಾಹಿತಿಗಾಗಿ ಪದೇ ಪದೇ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದಾಖಲೀಕರಣ ಅಗತ್ಯವಾಗಿದೆ. ಜಮೀನುಗಳ ಮೇಲೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಮಾಲೀಕರಿಗೆ ಈ ದಾಖಲೀಕರಣ ನೆರವಾಗುತ್ತದೆ ಎಂದರು.

ಜಮೀನಿನ ಕುರಿತು ತಿದ್ದುಪಡಿಗೆ ಜಿಲ್ಲಾಧಿಕಾರಿಗಳಿಗೆ ಅವಕಾಶವಿದ್ದು, ಅಧಿಕಾರಿಗಳು ಜಮೀನಿನ ಕುರಿತು ಸ್ಥಳಕ್ಕೆ ಭೇಟಿ ನೀಡಿ ಖುದ್ದಾಗಿ ಪರಿಶೀಲನೆ ನಡೆಸಬೇಕು. ಜೊತೆಗೆ ಆಧಾರ ಜೋಡಣೆಗೆ ಒತ್ತು ನೀಡಬೇಕು ಎಂದರು.

ಸಾರ್ವಜನಿಕರಿಗೆ ಭೂದಾಖಲೆಗಳು ನಿರ್ಣಾಯಕ ದಾಖಲೆಗಳಾಗಿರುತ್ತವೆ. ಅಂತಹ ದಾಖಲೆಗಳನ್ನು ತ್ವರಿತ ಹಾಗೂ ಸುಲಭವಾಗಿ ಒದಗಿಸುವುದರಿಂದ ಸಾಕಷ್ಟು ಅನಾನುಕೂಲತೆಯನ್ನು ನಿವಾರಿಸಬಹುದಾಗಿದೆ. ಸೀಮಿತ ಮಾನವ ಸಂಪನ್ಮೂಲ ಬಳಕೆ, ದಾಖಲೆ ಹುಡುಕುವ ಜಟಿಲತೆ-ಹಾನಿಯನ್ನು ಡಿಜೀಟಲಿಕರಣದಿಂದ ತಪ್ಪಿಸಿ, ಭೂದಾಖಲೆಗಳನ್ನು ಸಂರಕ್ಷಿಸಿ ನಿರ್ವಹಿಸಬಹುದಾಗಿದೆ. ಈ ಭೂ ಸುರಕ್ಷಾ ಯೋಜನೆಯಿಂದ ಮಹತ್ವದ ಭೂ ದಾಖಲೆಗಳ ಡಿಜಿಟಲ್ ರೂಪದಲ್ಲಿ ಶಾಶ್ವತವಾಗಿ ಸಂರಕ್ಷಿಸಬಹುದಾಗಿದೆ. ಭೌತಿಕ ಕಡತಗಳ ಬಳಕೆ ತಗ್ಗಿ, ಕಡತಗಳು ಶಿಥಿಲಾವಸ್ಥೆಗೊಳ್ಳುವುದು ತಪ್ಪಿಸಬಹುದಾಗಿದೆ. ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸಿ, ಸಮಯದ ವ್ಯರ್ಥವೂ ಆಗುವುದಿಲ್ಲ ಆದ್ದರಿಂದ ಎಲ್ಲ ಡಿಜಿಟಲೀಕರಣ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅವರು ಸೂಚನೆ ನೀಡಿದರು.

ನಮೂನೆ-1ರಿಂದ 5 ರಡಿ ಅರ್ಜಿಗಳ ಇಂಡೀಕರಣ ಮತ್ತು ವಿಲೇವಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಪಹಣಿ ಪತ್ರಿಕೆಯೊಂದಿಗೆ ಆಧಾರ್ ಜೋಡಣೆ ಜಿಲ್ಲೆಯಲ್ಲಿ ಶೇ.84.47 ರಷ್ಟು ಪ್ರಗತಿ ಸಾಧಿಸಿದ್ದು, ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ತ್ವರಿತಗತಿಯಲ್ಲಿ ಪಹಣಿ ಪತ್ರಿಕೆಯೊಂದಿಗೆ ಆಧಾರ್ ಜೋಡಣೆ ಮಾಡಬೇಕು. ಲ್ಯಾಂಡ್ ಬೀಟ್ ಅರ್ಜಿಗಳ ಇಂಡೀಕರಣ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಶೇ.98ರಷ್ಟು ಪ್ರಗತಿಯಾಗಿದೆ ಎಂದು ಅವರು ಹೇಳಿದರು.

ಕಂದಾಯ ನ್ಯಾಯಾಲಯಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ತಹಸೀಲ್ದಾರ್ ಹಂತದಲ್ಲಿ 3 ತಿಂಗಳ ಹಾಗೂ ಉಪ ವಿಭಾಗಾಧಿಕಾರಿಗಳ ಹಂತದಲ್ಲಿ 6 ತಿಂಗಳಕ್ಕೂ ಮೇಲ್ಪಟ್ಟ ಯಾವುದೇ ಬಾಕಿ ಉಳಿಸಿಕೊಳ್ಳದೇ ವಿಲೇವಾರಿ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಹೇಮಲತಾ ವಸ್ತ್ರದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net