ಬೇಲೂರಿನ ರೇವತಿ ಪ್ರಿಯಾ ಗೋಲ್ಡನ್ ಐಕಾನ್

24blrp3
Published on

ಬೇಲೂರು: ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ದ್ವಿತೀಯ ಆನಿವಾಸಿ ಕನ್ನಡಿಗರ ಹಾಗೂ ಹೊರ ನಾಡ ಕನ್ನಡಿಗರ ಸಮ್ಮೇಳನದಲ್ಲಿ ವಿವಿಧ ಸಮಾಜಮುಖಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬೇಲೂರು ಪಟ್ಟಣದ ರೇವತಿ ಪ್ರಿಯಾ ಅವರಿಗೆ ಸುವರ್ಣ ಸೌರಭ-2025(ಗೋಲ್ಡನ್ ಐಕಾನ್) ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ವೆಂಕಟೇಶ್ ಹಾಗೂ ಪುರಸಭೆ ಮಾಜಿ ಅಧ್ಯಕ್ಷೆ ತೀರ್ಥಕುಮಾರಿ ಅವರ ಪುತ್ರಿ ರೇವತಿ ಪ್ರಿಯಾ, ಇಂಗ್ಲೆಂಡ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿ ಅಲ್ಲಿ ಮತ್ತು ಭಾರತದಲ್ಲಿಯೂ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದನ್ನು ಗುರುತಿಸಿ ರೇವತಿ ಪ್ರಿಯಾ ಅವರಿಗೆ ದ್ವಿತೀಯ ಆನಿವಾಸಿ ಕನ್ನಡಿಗರ ಹಾಗೂ ಹೊರ ನಾಡ ಕನ್ನಡಿಗರ ಸಮ್ಮೇಳನಾಧ್ಯಕ್ಷ ಜನರಲ್ ಡಾ.ಡೇವಿಡ್ ಫ್ರಾಂಕ್ ಫರ್ನಾಂಡಿಸ್ ಹಾಗೂ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಸುವರ್ಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪುರಸ್ಕೃತೆ ರೇವತಿ ಪ್ರಿಯ ಮಾತನಾಡಿ, ಹೊರನಾಡು ಅನಿವಾಸಿ ಕನ್ನಡಿಗರು ವಿದೇಶದಲ್ಲಿ ವ್ಯಾಸಂಗ ಮಾಡಿ ಸಾಮಾಜಿಕ ಸೇವೆ ಸಲ್ಲಿಸುವವರಿಗೆ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ನನಗೆ ನೀಡಿರುವುದು ಸಂತೋಷವಾಗಿದೆ. ನಾನು ಇಲ್ಲಿವರೆಗೂ 100ಕ್ಕೂ ಹೆಚ್ಚು ಕಣ್ಣು ಕಾಣದ ವಿದ್ಯಾರ್ಥಿಗಳ ಪರೀಕ್ಷೆ ಬರೆದಿದ್ದೇನೆ. ಜತೆಗೆ ನಾನು ತಂದೆ-ತಾಯಿ ಸೇರಿದಂತೆ 100ಕ್ಕೂ ಹೆಚ್ಚು ಜನರು ನೇತ್ರದಾನಕ್ಕೆ ಸಹಿ ಹಾಕಿದ್ದೇವೆ. ಇದರೊಂದಿಗೆ ಇಂದಿಗೂ ಹೃದಯವಾಹಿನಿ ಸೇವಾ ಸಂಸ್ಥೆಯೊಂದಿಗೆ ಸಮಾಜಮುಖಿ ಕೆಲಸ ಮಾಡುತಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net