

ರೇವತಗಾಂವ: ಕರೊನಾ ವಾರಿಯರ್‌ಗಳಲ್ಲಿ ಮುಂಚೂಣಿಯಲ್ಲಿರುವ ಆಶಾ-ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಕರೊನಾ ಲಕ್ಷಣಗಳನ್ನು ಉಳ್ಳವರ ಮಾಹಿತಿಯನ್ನು ಸಂಗ್ರಹಿಸಿ ಜೌಷಧ ಉಪಚಾರವನ್ನು ಮಾಡುತ್ತಿರುವ ಅವರ ಕಾರ್ಯ ಶ್ಲಾಘನೀಯ ಎಂದು ತಾಲೂಕು ನೋಡಲ್ ಅಧಿಕಾರಿ ಬಿಇಒ ಶಿವಪ್ಪ ಹಾದಿಮನಿ ಹೇಳಿದರು.
ರೇವತಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಾಡೋಣ ಹಾಗೂ ಹಾಲಳ್ಳಿ ಗ್ರಾಮಗಳ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಶುಕ್ರವಾರ ರೇವತಗಾಂವ ಗ್ರಾಪಂ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಮನೆಮನೆಗಳಿಗೆ ತೆರಳಿ ಕರೊನಾ ಬಗ್ಗೆ ಜಾಗೃತಿ ಮೂಡಿಸಿ, ಕರೊನಾ ಲಕ್ಷಣಗಳು ಇದ್ದಲ್ಲಿ ತಕ್ಷಣವೇ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಿ ಆರೈಕೆ ಪಡೆಯುವಂತೆ ಮನವೊಲಿಸಿ. ಕರೊನಾ ನಿಯಂತ್ರಣ ಮಾಡುವಲ್ಲಿ ತಮ್ಮ ಗ್ರಾಮ ಪಂಚಾಯಿತಿ ಮಾದರಿಯಾಗಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ರೂಪಾ ಬೀರುಣಗಿ, ಕಾರ್ಯದರ್ಶಿ ಬಿ.ಕೆ.ಕುಂಬಾರ, ಎನ್‌ಜಿಒ ಅಧ್ಯಕ್ಷ ಎಸ್.ಎಲ್.ಮಾನೆ, ಗ್ರಾಪಂ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ನಂತರ ನಿವರಗಿ ಹಾಗೂ ಉಮರಜ ಗ್ರಾಮ ಪಂಚಾಯಿತಿಗಳಿಗೂ ನೋಡಲ್ ಅಧಿಕಾರಿ ಶಿವಪ್ಪ ಹಾದಿಮನಿ ಭೇಟಿ ನೀಡಿ, ಅಲ್ಲಿನ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಕರೊನಾ ನಿಯಂತ್ರಣಕ್ಕಾಗಿ ಸರ್ಕಾರದ ನಿಯಮಗಳಿಗೆ ಬದ್ಧರಾಗಿ ಕರೊನಾ ನಿಯಂತ್ರಣಕ್ಕಾಗಿ ತಮ್ಮೊಂದಿಗೆ ಕೈಜೋಡಿಸಿ ಎಂದು ಹೇಳಿದರು.