

ರೇವತಗಾಂವ: ಮಹಾರಾಷ್ಟ್ರದ ಭೀಮಾ ತೀರದ ನಗರಗಳಾದ ಸಾಂಗೋಲಾ, ಪಂಢರಪುರ ಹಾಗೂ ಸೊಲ್ಲಾಪುರ ಸೇರಿದಂತೆ ಇತರ ಹಳ್ಳಿಗಳ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಉಜನಿ ಜಲಾಶಯದಿಂದ 6 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ.
ಇದರಿಂದ ಕರ್ನಾಟಕದ ಭೀಮಾ ತೀರದ ಗ್ರಾಮಗಳಾದ ದಸೂರ, ಉಮರಜ, ರೇವತಗಾಂವ, ನಿವರಗಿ, ಗೋವಿಂದಪುರ, ಹೊಳೆಸಂಖ, ಉಮರಾಣಿ, ಧೂಳಖೇಡ, ಟಾಕಳಿ, ಶಿರನಾಳ, ಚಣೇಗಾಂವ ಸೇರಿದಂತೆ ಇತರ ಗ್ರಾಮಗಳ ಜನರಿಗೂ ನೀರಿನ ಅನುಕೂಲವಾಗಿದೆ.
ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೆ ಮಹಾರಾಷ್ಟ್ರದ ಜನ ಬತ್ತಿದ ಭೀಮಾ ನದಿ ಮೂಲಕ ಕಳ್ಳ ದಾರಿಯಿಂದ ಗಡಿ ಗ್ರಾಮಗಳ ಪ್ರವೇಶ ಮಾಡುತ್ತಿದ್ದರು. ಇದರಿಂದ ಗಡಿ ಗ್ರಾಮಗಳಲ್ಲಿ ಕರೊನಾ ಆತಂಕ ಹೆಚ್ಚಿತ್ತು. ಇದೀಗ ಉಜನಿ ಜಲಾಶಯದಿಂದ ನೀರು ಭೀಮೆಯ ಒಡಲು ಸೇರಿರುವುದರಿಂದ ಬುಧವಾರ ಸಂಜೆ ಕರ್ನಾಟಕ ಭಾಗದಲ್ಲಿ ವಲಸಿಗರ ದಾರಿ ಬಂದ್ ಆದಂತಾಗಿದೆ.
ಬಿಸಲಿನ ಪ್ರಖರತೆಯಿಂದಾಗಿ ನದಿ ಹಾಗೂ ಬ್ಯಾರೇಜ್‌ಗಳಲ್ಲಿನ ನೀರು ಬರಿದಾಗಿ ದಸೂರ ಹಾಗೂ ರೇವತಗಾಂವ ಕ್ರಾಸ್‌ಗಳಲ್ಲಿನ ಬಹುಹಳ್ಳಿ ಕುಡಿಯುವ ನೀರಿನ ಘಟಕಗಳು ಬಂದ್ ಆಗಿ ಅಲ್ಲಲ್ಲಿ ನೀರಿನ ಹಾಹಾಕಾರ ತಲೆದೂರಿತ್ತು. ರೈತರ ಬೆಳೆಗಳು ನೀರಿಲ್ಲದೇ ಸೊರಗಿ ಹೋಗುವ ಹಂತ ತಲುಪಿದ್ದವು. ಭೀಮೇಗೆ ನೀರು ಬಂದ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಹರ್ಷ ಕಾಣಿಸಿಕೊಂಡಿದೆ.