

ರೇವತಗಾಂವ: ಪಟ್ಟಣದಲ್ಲಿ ಸೋಮವಾರ ಎಂಎಸ್‌ಐಎಲ್ ಮಳಿಗೆ ಮುಂದೆ ಮದ್ಯ ಪ್ರಿಯರು ಸರದಿಯಲ್ಲಿ ತಮಗೆ ಬೇಕಾದ ಮದ್ಯ ಖರೀದಿಸಿದರು.
ಸ್ಥಳೀಯ ಎಂಎಸ್‌ಐಎಲ್‌ಗೆ ಅಬಕಾರಿ ನಿರೀಕ್ಷಕ ಎಂ.ಎಚ್. ಪಡಸಲಗಿ, ಡಿಇಒ ಮಂಜುನಾಥ ಬಡಿಗೇರ ಹಾಗೂ ಅಬಕಾರಿ ಹವಾಲ್ದಾರ್ ಅಶೋಕ ಗೋಣಸಗಿ ಭೇಟಿ ನೀಡಿ ಮ್ಯಾನೇಜರ್ ಶಿವಾನಂದ ವಡ್ರೆ, ಮಳಿಗೆ ಸಿಬ್ಬಂದಿ ಹಾಗೂ ಗ್ರಾಹಕರ ಸಮ್ಮುಖದಲ್ಲಿ ಅಂಗಡಿ ಸೀಲ್ ತಗೆದು, ಸ್ಟಾಕ್ ಪರಿಶೀಲಿಸಿದ ಬಳಿಕ ಮಾರಾಟಕ್ಕೆ ಅನುವು ಮಾಡಿಕೊಡಲಾಯಿತು.
ನಂತರ ಮಾತನಾಡಿದ ಅಬಕಾರಿ ನಿರೀಕ್ಷಕ ಎಂ.ಎಚ್. ಪಡಸಲಗಿ, ಮಹಾರಾಷ್ಟ್ರ ಗಡಿ ಪ್ರದೇಶವಾಗಿರುವುದರಿಂದ ಬೆಳಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ಅವಕಾಶವಿದ್ದು, ಮಳಿಗೆ ಸಿಬ್ಬಂದಿ ಹಾಗೂ ಗ್ರಾಹಕರು ಕಡ್ಡಾಯವಾಗಿ ಪರಸ್ಪರ ಅಂತರ ಕಾಯ್ದುಕೊಂಡು ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು ಎಂದು ತಿಳಿಸಿದರು.
ಮದ್ಯಪ್ರಿಯರು ಪರಸ್ಪರ ಅಂತರ ಕಾಯ್ದುಕೊಂಡು ಗುರುತು ಮಾಡಿದ ಸ್ಥಳದಲ್ಲಿ ಸಾಲಾಗಿ ನಿಂತು ತಮಗೆ ಬೇಕಾದ ಮದ್ಯ ಪಡೆದು ಸಂತಸದಿಂದ ಮರಳುತ್ತಿರುವುದು ಸಾಮಾನ್ಯವಾಗಿತ್ತು.